ಈಸಬೇಕು ಇದ್ದು ಜಯಿಸಬೇಕು ಗೆದ್ದು ಸಾಧಿಸಬೇಕು : ಹುಲ್ಲಾಗು ಬೆಟ್ಟದಡಿ(10)
ಸಾಧನೆಗೆ ಅಂಗಾಂಗಗಳು ಮುಖ್ಯವಲ್ಲ ಸಾಧಿಸುವ ಛಲ ಮುಖ್ಯ!
ನಮಸ್ಕಾರ ಎಲ್ಲರಿಗೆ ,
ಬಹಳ ದಿನಗಳ ನಂತರ ಹುಲ್ಲಾಗು ಬೆಟ್ಟದಡಿ ಅಂಕಣ ಬರೆಯುತ್ತಿದ್ದೇನೆ. ಕೆಲಸದ ಒತ್ತಡ ಮತ್ತು ಒಂದಿಷ್ಟು ಸೋಮಾರಿತನ. ನೀರಿನ ಫಿಲ್ಟರ್ ಕಂಡು ಹಿಡಿದ ನಿರಂಜನನ ಬಗ್ಗೆ ನಾವೆಲ್ಲಾ ಈಗಾಗಲೇ ಓದಿದ್ದೇವೆ. ಈಗ ಇನ್ನೊಬ್ಬ ನಿರಂಜನನ ಬಗ್ಗೆ ತಿಳಿಯುವ ಸಮಯ. ಕಾಕತಾಳೀಯ ನೋಡಿ!
ನಿನ್ನೆಯಷ್ಟೇ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನಿರಂಜನ್ ಮುಕುಂದನ್ ಎಂಬ Para olympics Swimmer ಬಗ್ಗೆ ಟ್ವೀಟ್ ಮಾಡಿ ಶುಭಾಶಯ ಕೋರಿದ್ದನ್ನು ನೋಡಿದೆ.
ಹುಲ್ಲಾಗು ಬೆಟ್ಟದಡಿ ಅಂಕಣದ ಉದ್ದೇಶವೇ ಸ್ಫೂರ್ತಿ ತುಂಬುವಂತಹ ಸಾಧನೆಗಳ ಬಗ್ಗೆ ಮತ್ತು ಸಾಧಕರ ಬಗ್ಗೆ ತಿಳಿದುಕೊಳ್ಳುವುದು. ಈಗಾಗಲೇ ಪ್ರಸಿದ್ದಿ ಪಡೆದಿರುವ, ಹೆಸರಿನಿಂದ ಚಿರ ಪರಿಚಿತರಾಗಿರುವ ಸಾಧಕರಲ್ಲ ಬದಲಾಗಿ ಎಲೆ ಮರೆಯ ಕಾಯಿಗಳಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಸಾಧಕರು.
ಹಾಗಾಗಿ ನನಗೆ ನಿರಂಜನ್ ಬಗ್ಗೆ ತಿಳಿದುಕೊಳ್ಳಬೇಕೆಂಬ ಸಹಜವಾದ ಕೂತುಹಲ. ಹಾಗೆ ಹುಡುಕುತ್ತ ಹೋದಂತೆ ನಿರಂಜನ್ ಅವರು ಮಾಡಿದ ಸಾಧನೆಗಳು, ದಕ್ಕಿಸಿಕೊಂಡ ಪದಕಗಳು, ಪ್ರಶಸ್ತಿಗಳು ಹೀಗೆ ಪ್ರತಿಯೊಂದು ನನ್ನ ಮುಂದೆ ತೆರೆದುಕೊಂಡವು.
ನಾನು ಯಾಕೆ ‘ಸಾಧನೆಗೆ ಅಂಗಾಂಗಗಳು ಮುಖ್ಯವಲ್ಲ ಸಾಧಿಸುವ ಛಲ ಮುಖ್ಯ’ ಎಂದು ಈ ಲೇಖನ ಶುರು ಮಾಡಿದೆಯೆಂದು ನಿಮಗೆ ಈಗ ಗೊತ್ತಾಗಿರಬಹುದು.
Spine Bifida ಎಂಬ ಕಾಯಿಲೆ ಬೆನ್ನು ಮೂಳೆ ಮತ್ತು ಬೆನ್ನಿನ ನರಗಳಿಗೆ ಸಂಬಂಧ ಪಟ್ಟ ಕಾಯಿಲೆ. ಸಾಮಾನ್ಯವಾಗಿ ಹುಟ್ಟಿನಿಂದಲೇ ಶುರುವಾಗುವ ಈ ರೋಗ, ಕೆಲವರಿಗೆ ಕಡಿಮೆ ಪ್ರಮಾಣದಲ್ಲಿದ್ದರೆ ಇನ್ನು ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿದ್ದು ಶರೀರಕ್ಕೆ ಹಾನಿಯನ್ನುಂಟು ಮಾಡುತ್ತದೆ.
ನಿರಂಜನನಿಗೆ ಇರೋದು ಇದೇ ಕಾಯಿಲೆ. ಇತರೆ ಮಕ್ಕಳಂತೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯುವುದಾಗಲಿ, ಗೋಡೆಯ ಆಶ್ರಯ ಹಿಡಿದುಕೊಂಡು ನಿಲ್ಲುವಂತಹ ಪ್ರಯತ್ನಗಳಾವುವು ಆತನ ಬಾಲ್ಯದಲ್ಲಿ ನಡೆಯಲಿಲ್ಲ. ಇವನು ನಡೆಯುವುದೇ ಕಷ್ಟ ಎಂದು ಹೇಳಿದ ವೈದ್ಯರು ಈಜುವುದನ್ನು ಕಲಿತರೆ ಶರೀರ ಮತ್ತು ಕಾಲು ಸದೃಢವಾಗಬಹುದೆಂದು ಹೇಳಿದರಂತೆ.
ಅಲ್ಲಿಂದ ಶುರುವಾಯಿತು ನಿರಂಜನನ ಈಜಿನ ಜೊತೆಗಿನ ಭಾಂದವ್ಯ.
ಯಾವುದೇ ಕೆಲಸ ಮಾಡಿದರು ಪರಿಶ್ರಮ, ತಾಳ್ಮೆ ಮತ್ತು ಮನೋಬಲ ಇರಲೇಬೇಕು. ಎಲ್ಲ ಕೆಲಸಗಳು instant ಫಲ ನೀಡುವುದಿಲ್ಲ. ಕಾಯಬೇಕು. ಕಾಯುವ ತಾಳ್ಮೆಯಿರಬೇಕು. ಜೋಗಿಯವರು ಹೇಳುವಂತೆ
‘ಕೆತ್ತಿಸಿಕೊಳ್ಳುವ ತಾಳ್ಮೆ ಇಲ್ಲದವನು ವಿಗ್ರಹವಾಗಲು ಹಂಬಲಿಸಲೇಬಾರದು . ಕಲ್ಲಾಗಿಯೇ ಇದ್ದು ಬಿಡಬೇಕು’.
ನಿರಂಜನನ ದೇಹದ ಕೆಳಭಾಗ ಸ್ವಾಧೀನದಲ್ಲಿರಲಿಲ್ಲ, ೧೭ ಸರ್ಜರಿ ಗಳಾಗಿ ದೇಹ ಜರ್ಜರಿತವಾಗಿತ್ತು , ಈಜಲು ಮುಖ್ಯವಾಗಿ ಬೇಕಾದ ಕಾಲುಗಳಿಗೆ ಶಕ್ತಿಯಿರಲಿಲ್ಲ. ಆದರೂ ನಿರಂಜನ ದೇಹದ ಊನತೆಯನ್ನು ನೆಪವಾಗಿಸಿಕೊಂಡು ಮನೆಯಲ್ಲಿ ಕೂರದೆ ಧೃಡ ಸಂಕಲ್ಪದಿಂದ ಈಜುವುದನ್ನು ಕಲಿತ. ಅದು ಕೇವಲ ಹತ್ತೇ ದಿನಗಳಲ್ಲಿ! ಭುಜಗಳ ಸಹಾಯದಿಂದ ಈಜುವುದನ್ನು ರೂಢಿಸಿಕೊಂಡ ನಿರಂಜನನಿಗೆ ಮೊದ ಮೊದಲು ಕಷ್ಟವಾದರೂ ಅಪ್ಪ ಅಮ್ಮನ ಬೆಂಬಲ ಮತ್ತು ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲಬೇಕೆಂಬ ಛಲ ಶಕ್ತಿ ತುಂಬಿತು.
ಕೇವಲ ಹತ್ತೇ ದಿನಗಳಲ್ಲಿ ಈಜುವುದನ್ನು ಕಲಿತ ನಿರಂಜನನಿಗೆ ಈಜುವುದರಲ್ಲಿ ಸಿಗುತ್ತಿದ್ದ ಖುಷಿ ಇನ್ನಾವುದರಲ್ಲೂ ಸಿಗುತ್ತಿರಲಿಲ್ಲ. ಇವನು ಈಜುವುದನ್ನು ನೋಡಿದ ಕೋಚ್ ಜಾನ್ ಕ್ರಿಸ್ಟೋಫರ್ ಇವನ ಸಾಮರ್ಥ್ಯವನ್ನು ಮನಗಂಡು ಹೆಚ್ಚಿನ ತರಬೇತಿ ನೀಡಿದರು.
ತರಬೇತಿಯ ಸಹಾಯದಿಂದ ಕೇವಲ ೮ ತಿಂಗಳಲ್ಲೇ ಪಳಗಿದ ನಿರಂಜನ್ Asian Para Games ನಲ್ಲಿ ಬೆಳ್ಳಿ ಗೆದ್ದ. ನಂತರ ಅವನು ನಡೆದ ದಾರಿಯಲ್ಲೆಲ್ಲ ಪ್ರಶಸ್ತಿಗಳು ಹುಟ್ಟಿದವು, ಸಾಧನೆಗಳು ಬಿಗಿದಪ್ಪಿದವು.
Finally and officially entered the Limca Book of World Records. Thank you @GoSportsVoices @merakiconnect @sony_india @JUBangalore pic.twitter.com/asnvf7jiXL
— Niranjan_Mukundan (@SwimmerNiranjan) April 2, 2017
ನಾನು ಯಾವಾಗಲೂ ಹೇಳುವಂತೆ ಸಾಧನೆಗೆ ಕರಾರುವಕ್ಕಾದ ವ್ಯಾಖ್ಯಾನವಿಲ್ಲ. ತಮ್ಮ ಪರಿಮಿತಿ ಮೀರಿ ಪರಿಶ್ರಮದಿಂದ ಮೇಲೆ ಬಂದವರೆಲ್ಲರೂ ಸಾಧಕರೇ.
ಆದರೆ ಕೆಲವರು ಮಾತ್ರ ಸಾಧನೆ ಎಂಬ ಪದಕ್ಕೆ ನಿಜ ಅರ್ಥವನ್ನು ಒದಗಿಸುವಲ್ಲಿ ಸಫಲರಾಗುತ್ತಾರೆ. ಅಂತಹವರಲ್ಲಿ ನಿರಂಜನನು ಒಬ್ಬ.
ಅವನು ಚಿಕ್ಕವನಾಗಿದ್ದಾಗ ಜನ ಅವನ ಅಮ್ಮ ಅಪ್ಪನಿಗೆ ಕೇಳುತ್ತಿದ್ದರಂತೆ ‘ಈ ಹುಡುಗ ದೊಡ್ಡವನಾದ ಮೇಲೆ ಅದ್ಹೇಗೆ ಕಾರು ಓಡಿಸುತ್ತಾನೆ’ ಎಂದು. ಆದರೆ ಇವತ್ತು ನಿರಂಜನ Golden Quadrilateral ನ್ನು ಕೇವಲ ೧೨೫ ಗಂಟೆಗಳ ಕಡಿಮೆ ಅವಧಿಯಲ್ಲಿ ಕ್ರಮಿಸಿ ಸಾಧನೆ ಮಾಡಿದಾತ. ಈ Golden Quadrilateral ಎಂಬುದು ಭಾರತದ ನಾಲ್ಕು ದೊಡ್ಡ ನಗರಗಳನ್ನು ಜೋಡಿಸಿರುವ ರಾಷ್ಟ್ರೀಯ ಹೆದ್ದಾರಿ. ದೆಹಲಿ, ಕಲ್ಕತ್ತ, ಬಾಂಬೆ ಮತ್ತು ಚೆನ್ನೈ ಈ ನಾಲ್ಕು ನಗರಗಳು. Golden Quadrilateral ನ್ನು ಕವರ್ ಮಾಡಬೇಕೆಂಬುದು ಪ್ರತಿಯೊಬ್ಬ ರೈಡರ್ ನ ಕನಸು. ಈ ಪ್ರಯಾಣದಲ್ಲಿ ಯಶಸ್ವಿಯಾದವರಲ್ಲಿ ನಿರಂಜನ ಅತಿ ಚಿಕ್ಕವ ಮತ್ತು ವೇಗವಾಗಿ ಕ್ರಮಿಸಿದವ. ಈತ ಡ್ರೈವಿಂಗ್ ಹೇಗೆ ಮಾಡುತ್ತಾನೆ ಎಂದು ಅವನ ಅಪ್ಪ ಅಮ್ಮನನ್ನು ಕೇಳಿದವರು ಬಾಯಿ ಮೇಲೆ ಬೆರಳಿಟ್ಟುಕೊಂಡಿರಲಿಕ್ಕೆ ಬೇಕು!
ನನ್ನ ಪ್ರಕಾರ ಕಷ್ಟಗಳಿರುವದೇ ಹಿಮ್ಮೆಟ್ಟಿ ನಿಲ್ಲಲು. ಅನುಭವಸ್ಥರು ಹೇಳಿದಂತೆ ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಕಷ್ಟ ಬಂದಿತೇ? ಈಗೀಗ ಮರಗಳಿಗೂ ಕಷ್ಟ ಬರುತ್ತಿದೆ ಬಿಡಿ, ಮನುಷ್ಯನಾದವನು ವಿಪರೀತ ಸ್ವಾರ್ಥಿಯಾಗುತ್ತಿರುವಾಗ ಈ ಭೂಮಿ ಮೇಲೆ ಜೀವಿಸುತ್ತಿರುವ ಪ್ರತಿಯೊಂದು ಜೀವಿ ಹಾಗು ನೈಸರ್ಗಿಕ ಸಂಪನ್ಮೂಲಕ್ಕೂ ಕಷ್ಟವೇ. ಅದು ಬೇರೆ ಮಾತು. ‘ಅದೇನೇ ಎದುರಾದರು ನನ್ನ ಆತ್ಮವಿಶ್ವಾಸವನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂಬ ನಂಬಿಕೆಯಿರಲಿ. ಇಡೀ ಜೀವನವೇ ಒಂದು ಪರೀಕ್ಷೆ. ಫೇಲಾದರೆ ಪಾಸಾಗುವವರೆಗೂ ಪರೀಕ್ಷೆ ಬರೆಯುತ್ತಿರಿ. ಪಾಸಾದರೆ ಮುಂದಿನ ಪರೀಕ್ಷೆಗೆ ಸಿದ್ಧರಾಗಿರಿ. ಒಟ್ಟಿನಲ್ಲಿ ಪರಿಶ್ರಮ ನಿಲ್ಲದಿರಲಿ.
ಇಂದು ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ಸೇರುವ ಪ್ರತಿಯೊಬ್ಬನಿಗೂ ಅವನದ್ದೇ ಆದ ನೋವಿದೆ, ಮೈ ಕೈ ಪರಚಿಕೊಂಡು ಸಾಗಿದ ಕಷ್ಟದ ಮುಳ್ಳಿನ ದಾರಿಯಿದೆ. ಅದೆಲ್ಲವನ್ನು ದಾಟಿ ಒಂದು ಹಂತಕ್ಕೆ ಬಂದು ಹಿಂದೆ ತಿರುಗಿ ನೋಡಿದಾಗ ಆ ಎಲ್ಲ ಕಷ್ಟಗಳು ಕ್ಷುಲ್ಲಕವಾಗಿ ಕಾಣಿಸುತ್ತವೆ. ಸಾಧನೆಯ ರುಚಿ ಹತ್ತುತ್ತದೆ. ಇನ್ನು ಸಾಧಿಸಬೇಕು ಎಂಬ ಹಂಬಲ ಚಿಗುರತೊಡುಗುತ್ತದೆ. ಆದ್ದರಿಂದ ಮೊದಲು ಒಂದು ಹೆಜ್ಜೆ ಇಡಬೇಕು. ತಾಳ್ಮೆ, ಆಸಕ್ತಿ, ಕನಸು, ಪರಿಶ್ರಮದಿಂದ ಕೂಡಿದ ಒಂದು ಹೆಜ್ಜೆ. ಆ ಒಂದು ಹೆಜ್ಜೆಯೇ ಇನ್ನೊಂದು ಹೆಜ್ಜೆಗೆ ಪ್ರೇರಣೆಯಾಗುತ್ತದೆ. ಹೀಗೆ ಒಂದೆರಡು ಹೆಜ್ಜೆಗಳ ಪಯಣ ನಡೆಯುವ ಹಂತಕ್ಕೆ ಬಂದು ನಂತರ ಓಡತೊಡಗುತ್ತದೆ.
ದೊಡ್ಡ ಕಟ್ಟಡ ನಿರ್ಮಾಣವಾಗುವುದು ಹಂತ ಹಂತವಾಗಿಯೇ ಅಲ್ಲವೇ….
೨೭ ಅಂತಾರಾಷ್ಟ್ರೀಯ ಪದಕಗಳು, ನೂರಕ್ಕೂ ಹೆಚ್ಚು ರಾಜ್ಯಮಟ್ಟದ ಪದಕಗಳು, ಏಕಲವ್ಯ ಪ್ರಶಸ್ತಿ ಹೀಗೆ ಲೆಕ್ಕಕ್ಕೆ ಸಿಗದಷ್ಟು ಸಮ್ಮಾನಗಳು ನಿರಂಜನನ ತೆಕ್ಕೆಗೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದೇ ಒಂದು ಹೆಮ್ಮೆ ನಮ್ಮ ಬೆಂಗಳೂರಿನ ಹುಡುಗನಿಗೆ.
ಒಲಿಂಪಿಕ್ಸ್, ಇನ್ನಿತರ ಸ್ಪರ್ಧೆಗಳ ತಯಾರಿ, ಭಾಗವಹಿಸುವುದರ ಜೊತೆಗೆ ನಿರಂಜನ ತನ್ನಂತೆ ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಸ್ಫೂರ್ತಿ ತುಂಬಲು ಭಾಷಣಗಳನ್ನು ಮಾಡುತ್ತಾನೆ. ಟೆಡ್ ಟಾಕ್ ಸ್ಟೇಜ್ ಮೇಲೆ ತನ್ನ ಪರಿಶ್ರಮದ ಗುಟ್ಟನ್ನು ಹಂಚಿಕೊಂಡು ಅನೇಕರಿಗೆ ಸ್ಪೂರ್ತಿಯಾಗಿದ್ದಾನೆ. ತಾನು ಸಾಗಿ ಬಂದ ದಾರಿಯನ್ನು ನೆನೆಸಿಕೊಳ್ಳುತ್ತಾ ನಗು ನಗುತ್ತಲೇ ಮಾತನಾಡುವ ನಿರಂಜನ ಉತ್ಸಾಹಿ ಯುವಕ. ಎಲ್ಲದಕ್ಕಿಂತ ಹೆಚ್ಚಾಗಿ ಅವನಿಗೆ ಜೀವನದ ಬಗ್ಗೆ ಯಾವುದೇ ಆರೋಪಗಳಿಲ್ಲ.
ನಿರಂಜನ ಅವರ ಮುಂದಿನ ಹಾದಿ ಹೀಗೆ ಪ್ರಶಸ್ತಿಗಳಿಂದ ತುಂಬಲಿ, ಅಂದುಕೊಂಡಿದ್ದೆಲ್ಲವೂ ನನಸಾಗಲಿ, ಪ್ರತಿ ಸ್ಪರ್ಧೆಯಲ್ಲೂ ವಿಜಯದ ಪತಾಕೆ ಹಾರೈಸುತ್ತ ನಮ್ಮಂತಹ ಸಾವಿರಾರು ಜನರಿಗೆ ಸ್ಫೂರ್ತಿ ತುಂಬಲಿ ಎಂದು ಹಾರೈಸುತ್ತ ಇಂದಿನ ಹುಲ್ಲಾಗು ಬೆಟ್ಟದಡಿ ಅಂಕಣವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.
ಚೆನ್ನಾಗಿರಿ ಎಲ್ಲರು 🙂
ಸಂಜೋತಾ ಅವ್ರೇ ನಿಮ್ಮ ಈ ಅಂಕಣ ಓದಿ ತುಂಬಾ ಖುಷಿಯಾಯಿತು.ಒಳ್ಳೆ ಮನಸ್ಸಿನಿಂದ ಸಾಧನೆ ಮಾಡಿದರೆ ಖಂಡಿತ ಗುರಿ ಮುಟ್ಟುತ್ತೇವೆ. ನಿರಂಜನ ನಂತಹ ಸಾಧಕರು ನಮಗೆಲ್ಲರಿಗೂ ಸ್ಪೂರ್ತಿ.