ಪ್ರಾಣಿಗಳೇ ಗುಣದಲಿ ಮೇಲು ಎನ್ನುವ ಧಾರವಾಡದ ಪ್ರಾಣಿಸೇವಕ ಸೋಮಶೇಖರ್: ಹುಲ್ಲಾಗು_ಬೆಟ್ಟದಡಿ(17)
ಇವತ್ತು ನಾನು ನಿಮಗೆಲ್ಲ ಪರಿಚಯಿಸುತ್ತಿರುವುದು ಈ ಅಪರೂಪದ ಪ್ರಾಣಿ ಸೇವಕನನ್ನು. ನಮ್ಮ ದೇಶದಲ್ಲಿ ಪ್ರಾಣಿಗಳಿಗೆ ಕೊನೆಯ ಪ್ರಾಶಸ್ತ್ಯ. ನಾವು ಮನುಷ್ಯರು ಎಲ್ಲವೂ ನಮಗೇ ದಕ್ಕಲಿ, ನಮ್ಮ ನೆರೆಮನೆಯವರಿಗಿಂತ ನಾವೇ ಚೆನ್ನಾಗಿರಲಿ ಎಂಬ ಧಾವಂತದಲ್ಲಿ ಮೂಕ ಪ್ರಾಣಿ- ಪಕ್ಷಿಗಳ ಮೇಲೆ ಭಯಂಕರ ನಿರ್ಲಕ್ಷ್ಯವನ್ನು ತಳೆದಿದ್ದೇವೆ. ನಮ್ಮ ಬೀದಿಯಲ್ಲಿ ಅತಿಯಾಗಿ ನಾಯಿಗಳಿದ್ದರೆ ನಮಗೆ ಕಿರಿಕಿರಿಯಾಗುತ್ತದೆ. ಅಪಾರ್ಟಮೆಂಟಿನ ಎಂಟನೇ ಮಹಲಿನಲ್ಲಿ ಕುಂಡದೊಳಗೆ ನಾವು ಬೆಳೆಸಿದ ಟೊಮೆಟೋ ಗಿಡದ ಪುಟ್ಟ ಕಾಯಿಯನ್ನು ಪಕ್ಷಿಯೊಂದು ಅರ್ಧ ಕುಕ್ಕಿ ಹೋದರೆ ನಮಗೆ ಸಿಟ್ಟು ಬರುತ್ತದೆ, ಸುಂದರವಾಗಿ ಬೆಳೆಸಿದ ಉದ್ಯಾನವನ್ನು ಯಾವುದೋ ಹಸು ಹಾಯ್ದು ಹಾಳುಗೆಡವಿದರೆ ನಮ್ಮ ಸಂಯಮ ಮೀರುತ್ತದೆ. ಪ್ರಾಣಿಗಳನ್ನು ಸಂಗ್ರಹಾಲಯಗಳಲ್ಲಿ ನೋಡಿ ಖುಷಿ ಪಡುತ್ತೇವೆ ನಾವು. ಹಾಗಂತ ಇದೆಲ್ಲ ತಪ್ಪು ಅಂತಿಲ್ಲ. ವರ್ಷಾನುಗಟ್ಟಲೇ ನೀರುಣಿಸಿ, ಪೊರೆದ ಉದ್ಯಾನವನ ಒಂದೇ ದಿನದಲ್ಲಿ ಹಾಳಾಗಿ ಹೋದರೆ ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ? ಅದು ಮನುಷ್ಯ ಸಹಜ ಗುಣ. ಆದರೆ ನಮ್ಮಲ್ಲಿ ಕೆಲವರಿದ್ದಾರೆ. ಮನುಷ್ಯತ್ವವನ್ನೇ ಮರೆತು ವರ್ತಿಸುವವರು. ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತದೆ. ಆಡಿ ಕಾರು ಚಲಾಯಿಸುತ್ತಿದ್ದವನೊಬ್ಬ ತಾನು ಹೋಗುತ್ತಿರುವ ದಾರಿಯನ್ನು ಬಿಟ್ಟು ಪಕ್ಕದ ರಸ್ತೆಯ ಕಡೆಗೆ ಕಾರು ತಿರುಗಿಸುತ್ತಾನೆ. ರಸ್ತೆಯ ಪಕ್ಕದಲ್ಲಿ ಮಲಗಿದ್ದ ನಾಯಿಯ ಮೇಲೆ ಬೇಕಂತಲೇ ಹಾಯಿಸಿಕೊಂಡು ಹೋಗುತ್ತಾನೆ. ಆ ನಾಯಿ ಸ್ಥಳದಲ್ಲೇ ಸಾವನ್ನಪ್ಪುತ್ತದೆ. ಈ ತರಹದ ಅಮಾನವೀಯ ಘಟನೆಗಳು ಎಷ್ಟೋ ನಡೆಯುತ್ತವೆ. ಕೆಲವೊಂದು ಬೆಳಕಿಗೆ ಬರುತ್ತವೆ. ಇನ್ನು ಕೆಲವು ಸದ್ದಿಲ್ಲದಂತೆ ಮರೆಯಾಗುತ್ತವೆ.
ಎಲ್ಲರೂ ಕೆಟ್ಟವರೇ ಅಂತಿಲ್ಲ. ನಮ್ಮಲ್ಲೂ ಅನೇಕರು ಪ್ರಾಣಿಗಳಿಗೆ ಮನೆಯ ಮೇಲೆ ಕುಡಿಯಲು ನೀರಿಡುತ್ತಾರೆ, ತಿನ್ನಲು ಒಂದು ಮುಷ್ಟಿ ಕಾಳು, ಹಿಡಿ ಅನ್ನ ಹಾಕುತ್ತಾರೆ. ನಮಗೂ ಪ್ರಾಣಿಗಳ ಮೇಲೆ ದಯೆ, ಅನುಕಂಪವಿದೆ. ಅವುಗಳಿಗೆ ಏನಾದರೂ ಮಾಡಬೇಕೆಂದು ತುಡಿಯುತ್ತೇವೆ. ಆದರೆ ಇಡೀ ವಾರ ಮನೆ, ಕೆಲಸ, ಹೆಂಡತಿ, ಗಂಡ, ಮಕ್ಕಳು ಎಂದು ಸಂಸಾರದಲ್ಲಿ ವ್ಯಸ್ತರಾಗಿರುವ ನಮಗೆಲ್ಲ ಈ ತರಹದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಹಳ ಸಮಯವೇ ಬೇಕಾಗುತ್ತದೆ. ಅಷ್ಟು ಸಮಯ ನಮ್ಮಲ್ಲಿಲ್ಲ. ಈ ಜಗತ್ತಿನಲ್ಲಿ ನಮ್ಮಂತಹವರೇ ಬಹಳಷ್ಟು ಜನರು ತುಂಬಿರುವಾಗ ಇರುವ ಸಮಯವನ್ನೇ ಹೊಂದಿಸಿಕೊಂಡು ಪ್ರಾಣಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರಲ್ಲ ಅಂತಹವರನ್ನು ಕಂಡರೆ ಖುಷಿಯಾಗುತ್ತದೆ. ನಾವು ಮಾಡಬೇಕು ಎಂದುಕೊಂಡ ಎಷ್ಟೋ ಕೆಲಸಗಳನ್ನು ಅವರಾದರೂ ಮಾಡುತ್ತಿದ್ದಾರಲ್ಲ ಎಂದು ಸಮಾಧಾನವಾಗುತ್ತದೆ. ಅವರನ್ನು ನೋಡಿ ಅಂತಹ ಶ್ರೇಷ್ಠ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ಸಿಗುತ್ತದೆ.
ಧಾರವಾಡದ ಈ ಯುವಕ ಅಂತಹ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಒಬ್ಬರು. ಹೆಸರು ಸೋಮಶೇಖರ್ ಚನ್ನಶೆಟ್ಟಿ. ಮೂಲತಃ ಧಾರವಾಡಿನವರಾದ ಸೋಮಶೇಖರ್ ಬಿ.ಎಸ್ಸಿ ಅಗ್ರಿಕಲ್ಚರ್ ಡಿಗ್ರಿ ಮುಗಿಸಿದ್ದಾರೆ. ೨೯ ವರ್ಷದ ಸೋಮಶೇಖರ್ ಪ್ರಾಣಿಗಳ ರೆಸ್ಕ್ಯೂ ಮಾಡುವ ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಬಗ್ಗೆ ನಾನು ಮೊದಲು ನೋಡಿದ್ದು ಫೇಸಬುಕ್ ಪೇಜ್ ಒಂದರಲ್ಲಿ. ಧಾರವಾಡದ ಸುತ್ತ ಮುತ್ತಲಿನ ಯಾವುದೇ ಹಳ್ಳಿಗಳಲ್ಲಿ ಅನಾಥವಾಗಿ ಒದ್ದಾಡುವ ಪ್ರಾಣಿಗಳು ಕಂಡರೆ ಬಹುತೇಕರು ಸೋಮಶೇಖರ್ ಅವರಿಗೆ ಕರೆ ಮಾಡುತ್ತಾರೆ. ನಾಯಿ, ಹಸು ಯಾವುದೇ ಪ್ರಾಣಿ ಇರಲಿ ಸೋಮಶೇಖರ್ ಅವುಗಳ ಸೇವೆಗೆ ಸಿದ್ಧ. ಕೆಲವು ವನ್ಯಜೀವಿಗಳನ್ನು ಸಹ ಅವರು ರಕ್ಷಿಸಿದ್ದಾರೆ. ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಲ್ಲಿ ಬಿಟ್ಟಿದ್ದಾರೆ. ಆದರೆ ಅವರಿಗೆ ಹೆಚ್ಚಾಗಿ ಕರೆಗಳು ಬರುವುದು ನಾಯಿಗಳಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ. ನಮ್ಮಲ್ಲಿ ಬೀದಿ ನಾಯಿಗಳೇ ಹೆಚ್ಚಿರುವುದರಿಂದ ಮೇಲಿಂದ ಮೇಲೆ ಅಂತಹ ಕರೆಗಳು ಬರುತ್ತಲೇ ಇರುತ್ತವೆ. ದಿನವಿರಲಿ, ರಾತ್ರಿಯಾಗಿರಲಿ, ಸೋಮಶೇಖರ್ ತಕ್ಷಣವೇ ಹೊರಡುತ್ತಾರೆ. ತಮಗೆ ಗೊತ್ತಿರುವ ವೈದ್ಯರಿಗೆ ಕರೆ ಮಾಡಿ ಅವರನ್ನು ಕರೆಸುತ್ತಾರೆ. ವೈದ್ಯರ ಅಭಾವವಿದ್ದಲ್ಲಿ ತಾವೇ ಔಷಧಿಯ ಅಂಗಡಿಯಿಂದ ವೈದ್ಯರು ಸೂಚಿಸುವ ಇಂಜೆಕ್ಷನ್, ಮಾತ್ರೆ ಇತ್ಯಾದಿಗಳನ್ನು ತೆಗೆದುಕೊಂಡು ಪ್ರಾಣಿಗಳ ಚಿಕಿತ್ಸೆಗೆ ಮುಂದಾಗುತ್ತಾರೆ. ಗಾಯವನ್ನು ಸ್ವಚ್ಛಗೊಳಿಸಿ, ಬ್ಯಾಂಡೇಜ್ ಹಾಕಿ ತಕ್ಕಮಟ್ಟಿಗೆ ತಮ್ಮ ಕೈಲಾದ ಚಿಕಿತ್ಸೆ ನೀಡುತ್ತಾರೆ. ನಂತರ ಆ ಪ್ರಾಣಿಯ ಹೊಟ್ಟೆ ಹೊರೆಯುವ ಸಿದ್ಧತೆಯನ್ನೂ ಮಾಡುತ್ತಾರೆ. ಆ ಓಣಿಯ ಜನಗಳಿಗೆ ಅಥವಾ ಯಾರು ಕರೆ ಮಾಡಿ ಕರೆಸಿದರೋ ಅವರ ಜೊತೆ ಮಾತನಾಡಿ ಪ್ರಾಣಿಗೆ ಗುಣ ಹೊಂದಿ ತನ್ನ ಆಹಾರವನ್ನು ತಾನೇ ಹುಡುಕಿಕೊಳ್ಳುವ ಮಟ್ಟಿಗೆ ಶಕ್ತವಾಗುವವರೆಗೂ ಊಟಕ್ಕೆ ಹಾಕಬೇಕೆಂದು ವಿನಂತಿಸಿಕೊಳ್ಳುತ್ತಾರೆ. ಕರೆ ಮಾಡಿದವರು ದಿನಕ್ಕೆ ಒಂದು ಹೊತ್ತಾದರೂ ಪ್ರಾಣಿಗಳಿಗೆ ಊಟ ಹಾಕಿದರೆ ಎಷ್ಟೋ ಸಹಾಯವಾಗುತ್ತದೆ ಎಂದು ಸೋಮಶೇಖರ್ ಹೇಳುತ್ತಾರೆ.
ಹೀಗೆ ದಿನಂಪ್ರತಿ ಸೋಮಶೇಖರ್ ಅವರ ಕಾಯಕ ಮುಂದುವರೆಯುತ್ತದೆ. ಕೆಲವೊಮ್ಮೆ ದಿನದಲ್ಲಿ ಹದಿನೈದಕ್ಕೂ ಹೆಚ್ಚು ಕರೆಗಳು ಬಂದು ಬೆಳಗಿನ ನಾಲ್ಕು ಗಂಟೆಯವರೆಗೂ ಅದೇ ಕೆಲಸದಲ್ಲಿ ವ್ಯಸ್ತವಾದ ಪ್ರಸಂಗಗಳು ಬೇಕಾದಷ್ಟಿವೆ. ಇಷ್ಟೇ ಅಲ್ಲ.. ಪ್ರತಿ ರಾತ್ರಿ ತಮ್ಮ ಗಾಡಿಯಲ್ಲಿಯೇ ಊರನ್ನೆಲ್ಲ ಸುತ್ತು ಹಾಕಿ ಬೀದಿ ನಾಯಿಗಳಿಗೆ ಊಟ ಹಾಕಿ ಬರುವ ಸೋಮಶೇಖರ್ ಅವರನ್ನು ಕರುಣಾಮಯಿ ಎಂದು ಹೊಗಳಿದರೆ ತಪ್ಪಾಗಲಿಕ್ಕಿಲ್ಲ. ನಿತ್ಯ ಮನೆಯಲ್ಲಿ ಹತ್ತು ಕೆಜಿ ಅನ್ನ ತಯಾರಿಸಿ ಅದಕ್ಕೆ ಪೆಡಿಗ್ರಿ ಸೇರಿಸಿ ತಮ್ಮ ಸ್ನೇಹಿತರೊಡನೆ ಈ animal feeding ಕಾರ್ಯಕ್ಕೆ ತೆರಳುವ ಸೋಮಶೇಖರ ಅವರ ನಿಸ್ವಾರ್ಥ ಕಾರ್ಯ ಹಲವರಿಗೆ ಮಾದರಿಯಾಗಿದೆ.
ಇದಕ್ಕೂ ಮೊದಲು ಮಶ್ರೂಮ್ ಫಾರ್ಮಿಂಗ್ ನಲ್ಲಿ ವ್ಯಸ್ತರಾಗಿದ್ದ ಸೋಮಶೇಖರ್ ನಂತರ ನಾಯಿಗಳಿಗೆ ತರಬೇತಿ ನೀಡುವ ಕಾಯಕವನ್ನು ಮುಂದುವರೆಸಿದರು. ನಂತರ ನಿಧಾನವಾಗಿ ರೆಸ್ಕ್ಯೂ ಕಾರ್ಯಾಚರಣೆ ಶುರುವಾಯಿತು. ಮೊದಲಿಗೆ ಪರಿಚಯವಿದ್ದ ಸ್ನೇಹಿತರಷ್ಟೇ ಸೋಮಶೇಖರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದರು. ೨೦೧೯ ರ ವರ್ಷಾಂತ್ಯದ ವೇಳೆಗೆ ಕೋರೊನಾ ವೈರಸ್ ವಿಶ್ವದೆಲ್ಲೆಡೆ ಹರಡಲು ಆರಂಭಿಸಿತು. ಕೆಲವು ತಿಂಗಳುಗಳ ನಂತರ ಭಾರತದಲ್ಲಿಯೂ ಸೋಂಕು ಹೆಚ್ಚಾಗತೊಡಗಿದಾಗ ಸರಕಾರ ಲಾಕಡೌನ್ ಘೋಷಿಸಿತು. ಜನರು ಹೊರಗೆ ಓಡಾಡುವುದು ನಿಷಿದ್ಧವಾಯಿತು. ಅಂಗಡಿ, ವ್ಯಾಪಾರ ಕೇಂದ್ರಗಳು ಬಾಗಿಲು ಮುಚ್ಚಿದವು. ದೇವಸ್ಥಾನಗಳಿಗೆ ಬೀಗ ಹಾಕಿದರು. ಎಲ್ಲರಿಗೂ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಸಿದ್ಧವಾಯಿತು. ವಾರದಲ್ಲಿ ನಿಗದಿಯಿದ್ದ ದಿನ ಮಾತ್ರವೇ ಜನರು ಅಗತ್ಯ ವಸ್ತುಗಳನ್ನು ಕೊಂಡಕೊಳ್ಳಬೇಕಿತ್ತು. ಮನುಷ್ಯರ ಜೀವನವೇ ಏರು ಪೇರಾದ ಹೊತ್ತಿನಲ್ಲಿ ಮೂಕ ಪ್ರಾಣಿಗಳ ಗೋಳನ್ನು ಕೇಳುವರಾರು? ಇದರ ಬಗ್ಗೆ ಯೋಚಿಸಿದ ಸೋಮಶೇಖರ್ ಸೋಷಿಯಲ್ ಮಿಡಿಯಾನಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಆರಂಭಿಸಿದರು. ಪ್ರಾಣಿಗಳಿಗೆ ಅಗತ್ಯವಿರುವ ಆಹಾರ ಮತ್ತು ನೀರನ್ನು ಒದಗಿಸಬೇಕೆಂಬ ವಿನಂತಿಯನ್ನು ತಮ್ಮ ಸ್ನೇಹಿತರ ವೃತ್ತದಲ್ಲಿ ಹಂಚಿಕೊಂಡರು. ಅನ್ಯರಿಗೆ ಮಾದರಿಯಾಗುವಂತೆ ತಾವು ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ಫೋಟೊ, ವಿಡಿಯೋಗಳನ್ನು ಹಂಚಿಕೊಂಡು ಇತರರಿಗೂ ಆ ತರಹದ ಫೋಟೊಗಳನ್ನು ತಮಗೆ ಕಳುಹಿಸುವಂತೆ ಕೇಳಿಕೊಂಡಾಗ ಒಬ್ಬರಿಂದೊಬ್ಬರಿಗೆ ಹರಡುತ್ತ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಜನಗಳಿಗೆ ಮುಟ್ಟಿತು. ಕರ್ನಾಟಕದಾಚೆಗಿನ ಜನರು ಸಹ ತಾವು ಪ್ರಾಣಿಗಳಿಗೆ ಸಹಾಯ ಮಾಡುವ ಫೋಟೊ ಹಂಚಿಕೊಂಡಾಗ ಸೋಮಶೇಖರ್ ಅವರಿಗೆ ದೊಡ್ಡದನ್ನು ಸಾಧಿಸಿದ ತೃಪ್ತಿ.
ಹೀಗೆ ಲಾಕಡೌನ್ ಸಮಯದಲ್ಲಿ ಸೋಮಶೇಖರ್ ಅವರು ಸಂಪೂರ್ಣವಾಗಿ ಪ್ರಾಣಿ ಸೇವಕರಾದರು. ಎಲ್ಲರಂತೆ ನೌಕರಿ, ಸಂಬಳದ ಆಸೆಗೆ ಬೀಳದೆ ತಮ್ಮ ಕೈಲಾದಷ್ಟು ಕೃಷಿ ಮಾಡುತ್ತ ಅದರ ಜೊತೆಗೆ ಪ್ರಾಣಿಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಸೋಮಶೇಖರ್. ಇದಕ್ಕೆಲ್ಲ ಖರ್ಚು ವೆಚ್ಚದ ನಿರ್ವಹಣೆ ಹೇಗೆ ಎಂದು ಕೇಳಿದರೆ ‘ನನ್ನ ಕೈಲೇ ಆದಷ್ಟ ಮಾಡ್ತೇನ್ರೀ ಮೇಡಮ್’ ಎಂದು ಮುಜುಗರದಿಂದಲೇ ಉತ್ತರಿಸುತ್ತಾರೆ. ಜೊತೆಗೆ ಕರೆ ಮಾಡಿ ಕರೆಸಿ ಸಹಾಯ ಪಡೆದವರಲ್ಲಿ ಕೆಲವರು ಹಣದ ಮೂಲಕ ಧನ್ಯವಾದ ತಿಳಿಸುತ್ತಾರೆ. ತಮ್ಮ ಈ ಕಾರ್ಯದಲ್ಲಿ ಸಹಭಾಗಿಯಾಗುವ ಪ್ರತಿಯೊಬ್ಬರನ್ನು ನೆನೆಯುತ್ತಾರೆ ಸೋಮಶೇಖರ್. ಕರೆಕಳುಹಿಸಿದಾಗಲೆಲ್ಲ ತಕ್ಷಣ ಬಂದು ಉಚಿತವಾಗಿ ಚಿಕಿತ್ಸೆ ನೀಡುವ ವೈದ್ಯರನ್ನು ಸ್ಮರಿಸಿಕೊಳ್ಳುತ್ತಾರೆ. ಉಚಿತವಾಗಿ ಗುಳಿಗೆ, ಔಷಧಿಗಳನ್ನು ನೀಡುವ ಮೆಡಿಕಲ್ ಸ್ಟೋರ್ ಮಾಲೀಕರಿಗೆ ಕೃತಜ್ಞರಾಗಿದ್ದಾರೆ. ಒಮ್ಮೆ ರೆಸ್ಕ್ಯೂ ಶುರು ಮಾಡಿದರೆ ಪ್ರಾಣಿಯು ಸಂಪೂರ್ಣವಾಗಿ ಗುಣ ಹೊಂದುವವರೆಗೆ ಸೋಮಶೇಖರ್ ಕಾಳಜಿ ತೆಗೆದುಕೊಳ್ಳುತ್ತಾರೆ. ಯಾವ ಬೀದಿಯ ನಾಯಿಯಿರುತ್ತದೋ ಅದು ಅಲ್ಲಿಯೇ ಗುಣವಾದರೆ ಅದಕ್ಕೆ ಹಿತ ಎಂಬುದು ಸೋಮಶೇಖರ್ ಅವರ ಅನಿಸಿಕೆ. ಇತರೆ ಪರಿಚಿತ ಪ್ರಾಣಿಗಳು ಆಗಾಗ ಬಂದು ಅದನ್ನು ನೋಡುವುದರಿಂದ ಅದಕ್ಕೊಂದು ಭದ್ರತೆಯ ಭಾವ ಬರುತ್ತದೆ. ಇಲ್ಲದೇ ಹೋದಲ್ಲಿ ಜಾಗ ಬದಲಾಗಿ, ಹೆದರಿಕೆಯಲ್ಲಿ ಸರಿಯಾಗಿ ಊಟ ನಿದ್ದೆ ಮಾಡುವುದಿಲ್ಲ. ಇದರಿಂದ ಗುಣವಾಗುವುದು ತಡವಾಗಬಹುದು ಎಂದು ತಮ್ಮ ಅನುಭವದಿಂದ ಕಂಡುಕೊಂಡಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂದು ಹೇಳುತ್ತಾರೆ. ಸೋಮಶೇಖರ್ ಅವರಲ್ಲಿ ಈ ಕಾರುಣ್ಯ ಹುಟ್ಟಿದ್ದು ಬಾಲ್ಯದಲ್ಲಿ ಅವರು ಬೆಳೆದು ಬಂದ ಪರಿಸರದಿಂದ. ಚಿಕ್ಕವರಿದ್ದಾಗಿನಿಂದಲೇ ನಾಯಿ, ಹಸು, ಕರುಗಳ ಜೊತೆಯಲ್ಲಿ ಬೆಳೆದ ಅವರಿಗೆ ಪ್ರಾಣಿಗಳನ್ನು ಆರೈಕೆ ಮಾಡಲು ಕಲಿಸಿದ್ದು ಅಜ್ಜ ಅಜ್ಜಿ. ಮನೆಯಲ್ಲಿರುವ ನಾಯಿ ಅಥವಾ ಕರುವಿಗೆ ಗಾಯವಾದರೆ ಅರಿಶಿಣ ಹಚ್ಚಿ ಅದರಿಂದ ಗುಣವಾಗದೇ ಇದ್ದಾಗ ಪ್ರಾಣಿ ವೈದ್ಯರ ಬಳಿ ಕರೆದೊಯ್ಯುತ್ತಿದ್ದರಂತೆ. ಅಲ್ಲಿ ಬರುತ್ತಿದ್ದ ಇತರೆ ಪ್ರಾಣಿಗಳ ನೋವಿನ ಬಗ್ಗೆ ವಿಚಾರಿಸುತ್ತ, ಅವುಗಳ ಆರೈಕೆಯ ಬಗ್ಗೆ ತಿಳಿದುಕೊಳ್ಳುತ್ತ ಬೆಳೆದರು. ಆ ಗುಣವೇ ಇಂದು ಹೆಮ್ಮರವಾಗಿದೆ. ಎಂತಹ ಸಮಯದಲ್ಲಿಯೂ ಪ್ರಾಣಿಗಳ ಸೇವೆಗೆ ಟೊಂಕ ಕಟ್ಟಿ ನಿಲ್ಲುವ ಇವರಿಗೆ ಅಮ್ಮನ ಸಹಕಾರವೇ ಬೆನ್ನೆಲುಬು. ಒಮ್ಮೊಮ್ಮೆ ಪ್ರಾಣಿಗಳಿಗೆ ಎಲ್ಲಿಯೂ ವಾಸದ ವ್ಯವಸ್ಥೆಯಾಗದೆ ಇದ್ದಾಗ ಸೋಮಶೇಖರ್ ಹಿಂದೆ ಮುಂದೆ ನೋಡದೆ ಅವುಗಳನ್ನು ಮನೆಗೆ ಕರೆದುಕೊಂಡು ಬಂದಾಗ ಅಷ್ಟೇ ಪ್ರೀತಿಯಿಂದ ಸ್ವಾಗತಿಸುತ್ತಾರಂತೆ ಅವರ ತಾಯಿ. ಇವರು ಹೊರಗೆ ಹೋದಾಗ ಪ್ರಾಣಿಗಳಿಗೆ ಅಗತ್ಯವಿರುವ ಔಷಧಿ, ಮಾತ್ರೆಗಳನ್ನು ಕೊಟ್ಟು ಮಕ್ಕಳಂತೆ ನೋಡಿಕೊಳ್ಳುತ್ತಾರೆ.
ಜನರು ಸೋಮಶೇಖರ್ ಅವರನ್ನು ಗುರುತಿಸುವ ಮಟ್ಟಿಗೆ ಇವತ್ತು ಅವರ ಪ್ರಾಣಿಸೇವಾ ಕಾರ್ಯಗಳು ಪ್ರಚಲಿತವಾಗಿವೆ. ಹಾಗಂತ ಎಲ್ಲರೂ ಹಾಡಿ ಹೊಗಳುತ್ತಾರೆ ಅಂತಿಲ್ಲ. ಕೆಲವರು ಕರೆ ಮಾಡಿ ದರ್ಪ ತೋರಿಸುತ್ತಾರೆ. ಕಾಲ್ ರಿಸೀವ್ ಮಾಡಲಿಲ್ಲವೆಂದರೆ ಮತ್ತೆ ಮತ್ತೆ ಮಾಡುತ್ತ ಕಿರಿಕಿರಿ ಮಾಡುತ್ತಾರೆ. ಸ್ಥಳಕ್ಕೆ ತಲುಪುವುದು ತಡವಾದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇವರು ಸರಕಾರದಿಂದ ನೇಮಿಸಲ್ಪಟ್ಟ ಪಶು ವೈದ್ಯರಿರಬಹುದು ಎಂದು ಭಾವಿಸಿ ಹಗುರವಾಗಿ ನೋಡುತ್ತಾರೆ. ಅಂತಹವರ ಬಗ್ಗೆ ಹೆಚ್ಚಿಗೆ ಹೇಳಲು ಹೋಗುವುದಿಲ್ಲ ಸೋಮಶೇಖರ್. ‘ಎಲ್ಲಾ ತರದ್ದ ಮಂದಿನೂ ಇದಾರ್ರೀ’ ಎಂದು ವಿನಮ್ರವಾಗಿ ಹೇಳುತ್ತಾರೆ. ಯಾಕೆಂದರೆ ಅವರನ್ನು ಪ್ರೋತ್ಸಾಹಿಸುವವರು ಅನೇಕರಿರುವಾಗ ಈ ತರಹದ ಜನಗಳ ಜೊತೆ ಗುದ್ದಾಡುತ್ತ ಸಮಯ ಹಾಳು ಮಾಡಿಕೊಳ್ಳುವುದು ಮೂರ್ಖತನ ಅಲ್ಲವೇ!
ಇಷ್ಟು ವರ್ಷಗಳ ಅನುಭವದಲ್ಲಿ ಸೋಮಶೇಖರ್ ಅವರಿಗೆ ಅನೇಕ ಕಹಿ ಪ್ರಸಂಗಗಳು ಎದುರಾಗಿವೆ. ಮನಸಿಗೆ ನೋವಾಗುವಂತಹ ಘಟನೆಗಳು ಅವರನ್ನು ಖಿನ್ನಗೊಳಿಸುತ್ತವೆ. ಅದರಲ್ಲಿ ಹೇಳಲೇಬೇಕಾದ ಒಂದು ಪ್ರಸಂಗವೆಂದರೆ ಧಾರವಾಡದ ನಾರಾಯಣಪುರದಲ್ಲಿ ನಡೆದ ಬೀದಿ ನಾಯಿಗಳ ಸಾಮೂಹಿಕ ಕೊಲೆ. ಸೋಮಶೇಖರ್ ಅವರು ಪ್ರತಿ ರಾತ್ರಿ ಈ ನಾಯಿಗಳಿಗೆ ಊಟ ಹಾಕುತ್ತಿದ್ದರು. ಆ ರಾತ್ರಿಯೂ ಬಂದು ಊಟ ಹಾಕಿದ್ದಾರೆ. ಆದರೆ ಸುಮಾರು ಒಂದು ಗಂಟೆಯಾಗಿದ್ದರಿಂದ ಅಲ್ಲಿ ಹೆಚ್ಚು ಸಮಯ ಕಳೆಯದೇ ಊಟ ಇಟ್ಟು ಹೊರಟು ಬಿಟ್ಟಿದ್ದಾರೆ. ಮಾರನೇ ದಿನ ಬೆಳಿಗ್ಗೆ ಸೋಮಶೇಖರ್ ಏಳುವ ಮೊದಲೇ ಅವರ ಫೋನ್ ರಿಂಗಣಿಸುತ್ತದೆ. ತಕ್ಷಣ ನಾರಾಯಣಪುರಕ್ಕೆ ಬಾ ಎಂದು ಸಂದೇಶ ಬಂದಾಗ ಸೋಮಶೇಖರ್ ಗಡಿಬಿಡಿಯಲ್ಲಿ ಹೊರಡುತ್ತಾರೆ. ಅಲ್ಲಿ ಹೋಗಿ ನೋಡಿದರೆ ಏಳೆಂಟು ನಾಯಿಗಳು ಅಡ್ಡಾದಿಡ್ಡಿಯಾಗಿ ಬಿದ್ದು ಸತ್ತು ಹೋಗಿವೆ. ಒದ್ದಾಡುತ್ತಿದ್ದ ಒಂದನ್ನು ಬದುಕಿಸುವ ಪ್ರಯತ್ನವನ್ನು ಸೋಮಶೇಖರ್ ಮಾಡಿದರೂ ಅದು ಮೂರು ತಿಂಗಳಿನಲ್ಲಿ ಸತ್ತು ಹೋಗುತ್ತದೆ. ಯಾರೋ ವಿಷವಿಟ್ಟು ಹೋಗಿದ್ದು ಸ್ಪಷ್ಟವಾಗುತ್ತದೆ. ಅವರು ತಂದಿಟ್ಟ ಅನ್ನದ ಚೀಲ ಅಲ್ಲಿಯೇ ಬಿದ್ದಿರುತ್ತದೆ. ಈ ಘಟನೆಯನ್ನು ನೆನೆಸಿಕೊಳ್ಳುತ್ತ ಬೇಜಾರು ಮಾಡಿಕೊಳ್ಳುತ್ತಾರೆ. ಇಂತಹ ಘೋರ ಕೃತ್ಯ ಎಸಗಲು ಮನಸಾದರು ಹೇಗೆ ಬಂತು ಎಂದು ಮರುಗುತ್ತಲೇ ‘ದೇವರು ನೋಡಿಕೊಳ್ತಾನೆ’ ನಿಟ್ಟುಸಿರುಡುತ್ತಾರೆ ಸೋಮಶೇಖರ್.
ಸ್ವತಃ ರಕ್ತದಾನಿಯಾಗಿರುವ ಸೋಮಶೇಖರ್ ಅವರ ನಾಯಿ ‘ಚಾರ್ಲಿ’ಯೂ ರಕ್ತದಾನ ಮಾಡಿದೆಯಂತೆ. ಒಮ್ಮೆ ವಿಜಯಪುರದಿಂದ ಬಂದ ಒಂದು ನಾಯಿಗೆ ಎಲ್ಲಿಯೂ ರಕ್ತ ಸಿಗದೇ ಇದ್ದಾಗ ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ತಜ್ಞರು ಸೋಮಶೇಖರ ಅವರ ಬಳಿ ವಿಚಾರಿಸುತ್ತಾರೆ. ತಕ್ಷಣವೇ ತಮ್ಮ ನಾಯಿಯನ್ನು ಕರೆದುಕೊಂಡು ಹೋಗಿ ಅದರಿಂದ ರಕ್ತ ಕೊಟ್ಟು ೮ ತಿಂಗಳ ವಯಸ್ಸಿನ ನಾಯಿಯನ್ನು ಬದುಕಿಸುತ್ತಾರೆ. ನಾಯಿಯನ್ನು ಸಾಕಿದ ಹಲವರು ಇಂತಹ ಪ್ರಸಂಗಗಳಲ್ಲಿ ರಕ್ತ ದಾನ ಮಾಡಲು ಒಪ್ಪುವುದಿಲ್ಲ. ಇದರ ಬಗ್ಗೆ ಸರಿಯಾದ ಜಾಗೃತಿ ಇಲ್ಲದೇ ಇರುವುದೇ ಕಾರಣ. ಮನುಷ್ಯರಂತೆಯೇ ಉತ್ತಮ ಆರೋಗ್ಯ ಹೊಂದಿದ ನಾಯಿಗಳಿಂದ ರಕ್ತ ದಾನ ಮಾಡಿಸಬಹುದು. ಇದರಿಂದ ರಕ್ತದ ಅಭಾವದಿಂದ ಸಾಯುವ ಎಷ್ಟೋ ನಾಯಿಗಳ ಜೀವ ಉಳಿಯುತ್ತದೆ. ‘ಆ ನೋವ ಏನ್ ಅಂತ ನಾಯಿ ಓನರ್ ಅವರಿಗಷ್ಟ ಗೊತ್ರೀ’ ಎಂದು ಮಾರ್ಮಿಕವಾಗಿ ನುಡಿಯುವ ಸೋಮಶೇಖರ್ ತಮ್ಮ instagram ಮತ್ತು facebook page ನಲ್ಲಿ ಈ ತರಹದ ಪ್ರಾಣಿಗಳ ಬಗೆಗಿನ ಜನಜಾಗೃತಿಯ ಸಂದೇಶಗಳನ್ನು ಹಾಕುತ್ತಲೇ ಇರುತ್ತಾರೆ.
ಹಲವು ಪತ್ರಿಕೆ, ಮಾಧ್ಯಮಗಳು ಸೋಮಶೇಖರ್ ಅವರ ಈ ಸಮಾಜಸೇವೆಯನ್ನು ಗುರುತಿಸಿವೆ. ಅದರಲ್ಲಿ ಪ್ರಮುಖವಾಗಿದ್ದು ಡೆಕ್ಕನ್ ಹೆರಾಲ್ಡ್ ನಲ್ಲಿ ಮೊಟ್ಟ ಮೊದಲು ಪ್ರಕಟವಾದ ಅವರ ಬಗೆಗಿನ ಲೇಖನ. ನಂತರ ಸುವರ್ಣ ವಾಹಿನಿಯ ಬಿಗ್ ಥ್ರೀ ಹೀರೋ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆ ಎಲ್ಲವನ್ನು ತಮ್ಮಷ್ಟಕ್ಕೆ ನಿಭಾಯಿಸುತ್ತಿರುವ ಸೋಮಶೇಖರ್ ಅವರಿಗೆ ಇನ್ನು ಹೆಚ್ಚಿನದನ್ನು ಮಾಡುವ ಹಂಬಲವಿದೆ. ಹುಟ್ಟುಹಬ್ಬ, ವಾರ್ಷಿಕೋತ್ಸವ ಇಂತಹ ಸಂತಸದ ಸಂದರ್ಭಗಳಲ್ಲಿ ಜನರು ಪ್ರಾಣಿಗಳಿಗೆಂದು ಊಟ ಇತ್ಯಾದಿ ಕೊಡುತ್ತಾರೆ. ಇವರು ರಾತ್ರಿ ಊಟ ಹಾಕುವ ಬಗ್ಗೆ ಗೊತ್ತಿರುವುದರಿಂದ ಹಲವರು ಅನ್ನ ಮಾಡಿ ಕೊಡುತ್ತಾರೆ. ಸ್ನೇಹಿತರು ಸೋಮಶೇಖರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ‘ಒಂದೇ ಕೈಯ್ಯಿಂದ ಚಪ್ಪಾಳೆ ಆಗೋದಿಲ್ಲ. ನಾವು ಧಾರವಾಡದ ಜನರೆಲ್ಲ ಸೇರಿ ಮಾಡ್ತೇವಿ’ ಎಂದು ವಿನಯದಲ್ಲಿ ಹೇಳುವ ಸೋಮಶೇಖರ್ ಅಂತಹವರು ಸಿಗುವುದು ಅಪರೂಪ. ಅಂತಹವರ ಸಂತತಿ ಇನ್ನೂ ಹೆಚ್ಚಾಗಲಿ. ಸೋಮಶೇಖರ್ ಅವರ ಈ ಸೇವೆ ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯಲಿ. ಅದಕ್ಕೆ ಬೇಕಾದ ಸಕಲ ಸಹಕಾರ, ಆದಾಯ ಅವರಿಗೆ ಸಿಗಲಿ ಎಂದು ಈ ಲೇಖನದ ಮೂಲಕ ಆಶಿಸೋಣ.
ಧನ್ಯವಾದಗಳು.