ಸ್ವಪರಿಶ್ರಮದಿಂದ ಸಾಧನೆಯ ಶಿಖರ ಏರಿದವರು, ನಮಗವರು ಅಚ್ಚುಮೆಚ್ಚು: ಹುಲ್ಲಾಗು ಬೆಟ್ಟದಡಿ(7)
ಜೀವ ಮತ್ತು ಜೀವನ ಎರಡು ಬಹಳ ದೊಡ್ಡದು. ಮಾನವ ಜನ್ಮ ಬಲು ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಪುರಂದರದಾಸರು ಹೇಳುವಂತೆ ಇಲ್ಲಿ ನಿತ್ಯವೂ ಬದುಕಬೇಕು. ಪ್ರತಿ ಘಳಿಗೆಯನ್ನು, ಪ್ರತಿ ದಿನವನ್ನು ದೇವರ ಪ್ರಸಾದದಂತೆ ಕಣ್ಣಿಗೊತ್ತಿಕೊಂಡು ದೇವರಿಗೂ ಸಹ ಹೊಟ್ಟೆಕಿಚ್ಚಾಗುವಂತೆ ಬದುಕಬೇಕು. ಕೈಲಾದಷ್ಟು ಅನ್ಯರಿಗೆ ಸಹಾಯ ಮಾಡಬೇಕು. ಆದರೆ ಇದೆಲ್ಲ ಹೇಳುವುದು ಸುಲಭ. ಪುಟಗಟ್ಟಲೆ ಒಳ್ಳೆಯ ಮಾತುಗಳನ್ನು, ವಿಚಾರಗಳನ್ನು ಬರೆಯಬಹುದು. ಆದರೆ ಬರೆದಂತೆ, ಹೇಳಿದಂತೆ ಬದುಕುವುದು ಕಷ್ಟ.
ಕೆಲವರು ಹೇಳುವುದೊಂದು ಮಾಡುವುದು ಇನ್ನೊಂದು. ಇನ್ನು ಕೆಲವರು ಹೇಳಿದಂತೆ ಬದುಕುತ್ತಾರೆ. ಕೆಲವರಲ್ಲಿ ಕೆಲವರು ಮಾತ್ರ ತಮ್ಮ ಬದುಕಿನ ಮುಖಾಂತರ ಹೇಳುತ್ತಾರೆ, ಹೀಗೆಯೇ ಬದುಕಬೇಕು ಎಂದು ತೋರಿಸಿ ಕೊಡುತ್ತಾರೆ. ಅವರ ಸಾಧನೆಯೇ ಮಾತನಾಡುತ್ತದೆ. ಆ ಕೆಲವರಲ್ಲಿ ಕೆಲವರ ಸಾಲಿಗೆ ಸೇರಿದ ಧೀಮಂತ ಮನುಷ್ಯ ಅಬ್ದುಲ್ ಕಲಾಂ.
ಕಲಾಂರ ಬಗ್ಗೆ ಯಾರಿಗೆ ಗೊತ್ತಿಲ್ಲ. ತಮಿಳುನಾಡಿನ ಒಂದು ಸಣ್ಣ ಹಳ್ಳಿ ಹುಟ್ಟಿ, ಸಣ್ಣ ಮನೆಯಲ್ಲಿ ಬೆಳೆದ ಒಬ್ಬ ಸಾಮಾನ್ಯ ಬಾಲಕ ಜಗತ್ತಿಗೆ ಮಾದರಿಯಾಗುತ್ತಾನೆ, ಎಲ್ಲರು ಪ್ರೀತಿಸುವ ಅಜಾತಶತ್ರುವಾಗುತ್ತಾನೆ ಎಂದರೆ ಸಾಮಾನ್ಯ ಮಾತಲ್ಲ. ನೀರಿನ ಮೇಲೆ ನಡೆದು ದಡ ಮುಟ್ಟುವ ಸಾಧನೆ ಅದು.
ಕಲಾಂ ಅವರಿಗೆ ಬದುಕಿನ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ. ರಾಮೇಶ್ವರದ ಆ ಮನೆಯಲ್ಲಿ ಕಡು ಬಡತನವಿದ್ದರೂ ಜೀವನಪ್ರೀತಿಗೆ ಕೊರತೆಯಿರಲಿಲ್ಲ. ಸಂಬಂಧಗಳ ಬೆಲೆ ತಿಳಿದಿತ್ತು. ತನ್ನನ್ನು ತಿದ್ದಿ ತೀಡುವ ಶಿಕ್ಷಕರ ಮೇಲೆ ಗೌರವವಿತ್ತು. ಶಾಸ್ತ್ರೀ, ಅರವಿಂದನ್ ಮತ್ತು ಶಿವಪ್ರಕಾಶನ್ ರ ಜೊತೆಗೆ ಸ್ನೇಹಬಂಧವಿತ್ತು. ಬದುಕಿಗಾಗಿ ದಿನವೂ ಸುದ್ದಿ ಪತ್ರಿಕೆಗಳನ್ನು ಮಾರುತ್ತಿದ್ದರೂ ಕಲಾಂ ನಿತ್ಯ ಸಂತೃಪ್ತ.
ನೀನು ಸತ್ತ ಮೇಲೂ ಜನ ನಿನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದರೆ ಜನ ಓದಬಹುದ್ದಾದ್ದನ್ನು ಬರೆ ಇಲ್ಲವೇ ನಿನ್ನ ಬಗ್ಗೆ ಜನ ಬರೆಯುವಂತಹದ್ದನ್ನು ಮಾಡು ಎಂದು ತತ್ವಜ್ಞಾನಿಯೊಬ್ಬ ಹೇಳುತ್ತಾನೆ. ಕಲಾಂ ಎರಡನ್ನು ಮಾಡಿದರು. ಶತಮಾನಗಳೇ ಉರುಳಿದರು ಮಿಸೈಲ್ ಕ್ಷೇತ್ರದಲ್ಲಿ, ರಕ್ಷಣಾ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಜನ ಮರೆಯಲು ಸಾಧ್ಯವಿಲ್ಲ. ತಮ್ಮ ಜೀವನವನ್ನು ತೆರೆದಿಟ್ಟು ಸಾವಿರಾರು ಜನರಿಗೆ ಸ್ಫೂರ್ತಿ ನೀಡುವಂತಹ ಮಾತುಗಳಲ್ಲಿ ‘ವಿಂಗ್ಸ್ ಆಫ್ ಫೈರ್’ ಬರೆದರು.
1979 ರಲ್ಲಿ ಉಡಾವಣೆಗೊಂಡ SLV-3 (Space launching vehicle) ಪ್ರೋಜೆಕ್ಟಿನ ಮುಂದಾಳತ್ವವನ್ನು ಅಬ್ದುಲ್ ಕಲಾಂ ವಹಿಸಿಕೊಂಡಿದ್ದರು. ಅಷ್ಟೊತ್ತಿಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳಾದ US, UK, ಜಪಾನ್ ಮುಂತಾದವುಗಳು ಅಂತರಿಕ್ಷದಲ್ಲಿ ತಮ್ಮ ಹೆಜ್ಜೆಯನ್ನು ಊರಿದ್ದರು. 1979 ರಲ್ಲಿ ಉಡಾವಣೆಗೊಂಡ SLV-3 ರೋಹಿಣಿ ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸಲಾಗಲಿಲ್ಲ. ಉಡಾವಣೆಯಾದ 5.2 ನಿಮಿಷಗಳಲ್ಲಿ ಬೇ ಆಫ್ ಬೆಂಗಾಲ್ ಬಳಿ SLV-3 ಸ್ಫೋಟಗೊಂಡಿತು. ಭಾರತದ ಅಭಿವೃದ್ಧಿ ಕಂಡರಾಗದ ದೇಶದ ಸುದ್ದಿ ಪತ್ರಿಕೆಗಳೆಲ್ಲ ಇದನ್ನೇ ದೊಡ್ಡ ಸುದ್ದಿಯಾಗಿ ಬರೆದವು. ಆದರೆ SLV-3 ಪ್ರಾಜೆಕ್ಟ್ ಗೆ ದೈತ್ಯ ಶಕ್ತಿಯಾಗಿ ನಿಂತಿದ್ದು ನಮ್ಮ ಕಲಾಂ. ಛಲ ಬಿಡದ ತ್ರಿವಿಕ್ರಮನಂತೆ ಕಲಾಂ ಹಗಲು ರಾತ್ರಿ ತಮ್ಮ ತಂಡದೊಂದಿಗೆ ಕೆಲಸ ಮುಂದುವರೆಸಿದರು. ಎಷ್ಟೋ ಜನ ವಿಜ್ಞಾನಿಗಳು SLV-3 ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿದರು. ಜುಲೈ 18, 1980 ರಂದು SLV-3 ಮತ್ತೆ ಉಡಾವಣೆಯಾಗುತ್ತದೆ. ಈ ಬಾರಿ ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಕಲಾಂ ಇದ್ದಷ್ಟು ವರುಷಗಳು ಇಸ್ರೋದ ಪಾಲಿನ ಬಂಗಾರದ ಸಮಯ. ಒಂದಾದ ಮೇಲೊಂದರಂತೆ ಯಶಸ್ವಿ ಉಡಾವಣೆಗಳ ಜೊತೆಗೆ, ಒಂದೇ ಪ್ರಯತ್ನದಲ್ಲಿ 104 ಉಪಗ್ರಹಗಳನ್ನು GSLV MArk-3 ಯ ಮೂಲಕ ಉಡಾವಣೆ ಮಾಡಿದ್ದು ಇತಿಹಾಸದಲ್ಲೇ ಮೈಲಿಗಲ್ಲು.
SLV-3 ಮೇಲೆ ಕೆಲಸ ಮಾಡುವಾಗ ಕಲಾಂ ಜೊತೆ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬ ಒಂದು ದಿನ ಬೇಗ ಮನೆಗೆ ಹೋಗಲು ಅನುಮತಿ ಕೇಳುತ್ತಾನೆ. 5.30ಕ್ಕೆ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗುವುದಾಗಿ ಮಾತು ಕೊಟ್ಟಿದುದರ ಬಗ್ಗೆ ಹೇಳಿದಾಗ ಕಲಾಂ ಸಮ್ಮತಿಸುತ್ತಾರೆ. ಮನೆಗೆ ಹೋಗುವ ಹುಮ್ಮಸ್ಸಿನಲ್ಲಿ ಆತ ಬೇಗ ಕೆಲಸ ಮುಗಿಸುವ ಉದ್ದೇಶದಿಂದ ಕೆಲಸದಲ್ಲಿ ತಲ್ಲೀನನಾಗುತ್ತಾನೆ. ಎಲ್ಲ ಕೆಲಸ ಮುಗಿಸಿ ಸಮಯ ನೋಡಿದಾಗ ಬರೋಬ್ಬರಿ 8.30. ಮನೆಯಲ್ಲಿ ಮಕ್ಕಳು ಕಾಯುತ್ತಿರುವುದರ ನೆನಪಾಗಿ ಅವಸರದಿಂದ ಮನೆಗೆ ಓಡುತ್ತಾನೆ. ಮನೆಯಲ್ಲಿ ಹೆಂಡತಿ ಸೋಫಾ ಮೇಲೆ ಪತ್ರಿಕೆಯೊಂದನ್ನು ಓದುತ್ತ ಕುಳಿತಿದ್ದಾಳೆ. ಮಕ್ಕಳ ಸುಳಿವಿಲ್ಲ. ಶಾಂತವಾಗಿರುವ ಹೆಂಡತಿಯನ್ನು ಕಂಡ ಇವನಿಗೆ ಇನ್ನು ಢವ ಢವ. ಹೆಂಡತಿಯ ಬಳಿ ಮಕ್ಕಳ ಬಗ್ಗೆ ವಿಚಾರಿಸಿದಾಗ ಸಂಜೆ 5.15 ಕ್ಕೆ ಅವನ ಮ್ಯಾನೇಜರ್ ಬಂದು ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿರುವುದಾಗಿ ಹೇಳುತ್ತಾಳೆ. ವಿಷಯ ಏನೆಂದರೆ 5 ಗಂಟೆಯಾದರೂ ಈತ ಕೂತ ಜಾಗದಿಂದ ಅಳ್ಳಾಡದಿದ್ದನ್ನು ಕಂಡ ಕಲಾಂರು ಸ್ವತಃ ತಾವೇ ಆತನ ಮನೆಗೆ ಹೋಗಿ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗಿದ್ದರಂತೆ. ಈ ಕತೆಯ ನೈಜತೆಯ ಬಗ್ಗೆ ಕರಾರುವಕ್ಕಾಗಿ ಗೊತ್ತಿಲ್ಲ. ಆದರೆ ತಳ್ಳಿ ಹಾಕುವುದಕ್ಕಾಗುವುದಿಲ್ಲ. ಕಲಾಂರ ಮನಸೇ ಅಂತಹದು. ಚಿಕ್ಕ ಮಕ್ಕಳಿಗಿರುವಂತಹ ಮುಗ್ಧ ಮನಸು.
ಕನಸನ್ನು ಕಾಣಬೇಕು, ಕನಸು ಕಂಡರಷ್ಟೇ ಗುರಿಯತ್ತ ಮುನ್ನುಗ್ಗಲು ಸಾಧ್ಯ ಎಂದು ಹೇಳಿದ ಕಲಾಂ ವಿಷನ್ 2020 ಎಂಬ ಬೃಹತ ಕನಸನ್ನು ನಮ್ಮೆಲ್ಲರಿಗೆ ಹಂಚಿ ಹೋದರು. 2020 ರ ಹೊತ್ತಿಗೆ ಭಾರತ ಹೇಗಿರಬೇಕು ಎಂಬ ಕನಸು ಅದು. ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಮನುಷ್ಯನ ಬುದ್ಧಿಬಲವನ್ನು ಉಪಯೋಗಿಸಿ ಜಿಡಿಪಿ ಬೆಳವಣಿಗೆಯನ್ನು ದುಪ್ಪಟ್ಟುಗೊಳಿಸುವ ವಿಚಾರ. ಕೃಷಿ, ಆಹಾರ ಸಂಸ್ಕರಣೆ, ವಿಶ್ವಾಸಾರ್ಹ ಮತ್ತು ಗುಣಮಟ್ಟದ ವಿದ್ಯುತ್ ಶಕ್ತಿ, ಸಾರಿಗೆ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಹೀಗೆ ಹಲವು ಕ್ಷೇತ್ರಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ತಮ್ಮ ಅಭಿಪ್ರಾಯಗಳನ್ನು, ಯೋಜನೆಗಳನ್ನು ಕಲಾಂ ಸಂಗ್ರಹಿಸಿ ಇಟ್ಟರು.
ರಾಷ್ಟ್ರಪತಿಯಾಗಿ ಎರಡು ಸೂಟಕೇಸುಗಳೊಂದಿಗೆ ಬಂದು ಅತ್ಯಂತ ನಿಷ್ಠರಾಗಿ ಸೇವೆ ಸಲ್ಲಿಸಿ ಮತ್ತೆ ಅದೇ ಎರಡು ಸೂಟಕೇಸುಗಳೊಂದಿಗೆ ಮರಳಿದರು. ದೇಶ ನನಗೇನು ಮಾಡಿದೆ ಎಂದು ಕೇಳುವುದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬ ಮಾತಿನಂತೆ ಕಲಾಂ ಇಡೀ ಜೀವನ ದೇಶಕ್ಕಾಗಿ ದುಡಿದರು. ಈ ಬ್ರಹ್ಮಚಾರಿ ಮದುವೆಯಾಗಲಿಲ್ಲ, ಆಸ್ತಿ ಮಾಡಿಕೊಳ್ಳಲಿಲ್ಲ, ಭವ್ಯ ಜೀವನ ನಡೆಸಲಿಲ್ಲ, ಅಕ್ರಮ ವ್ಯವಹಾರ ಮಾಡಲಿಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲಿಯೂ ರಾಜಕೀಯದ ದರ್ಪವಾಗಲಿ, ಅಧಿಕಾರದ ಮದವನ್ನಾಗಲಿ ತೋರಿಸಲಿಲ್ಲ. ಮಕ್ಕಳೊಡನೆ ಮಕ್ಕಳಾದರು. ಯಾರೇ ಎದುರಿಗೆ ಬಂದರು ಮುಗುಳುನಗೆಯಿಂದ ಸ್ವಾಗತಿಸಿದರು. ಜನರಲ್ಲಿ ಒಬ್ಬರಾದರು.
ಬಹುಶಃ ನಮ್ಮ ದೇಶದಲ್ಲಿಯೇ ನಿಸ್ವಾರ್ಥ ರಾಜಕಾರಣಿಗಳೆಂದರೆ ಕಲಾಂ ಮತ್ತು ವಾಜಪೇಯಿ ಇಬ್ಬರೇ ಎಂದ್ಹೇಳಬಹುದೇನೋ. ಎಲ್ಲರು ಕೊಚ್ಚೆಯಲ್ಲಿ ಬಿದ್ದು ಹೊರಳಾಡುತ್ತಾ ಇನ್ನೊಬ್ಬರತ್ತ ಕಲ್ಲು ಎಸೆಯುವವರೇ..
ಕಲಾಂ ಆಸ್ತಿ ಮಾಡಲಿಲ್ಲ ಆದರೆ ಜನರನ್ನು ಗಳಿಸಿದರು. ಮದುವೆ ಮಾಡಿಕೊಳ್ಳಲಿಲ್ಲ ಆದರೆ ಇಡೀ ಜಗತ್ತಿನ ಪ್ರೀತಿಪಾತ್ರರಾದರು. ಒಡವೆ ವಸ್ತ್ರ ವಿನ್ಯಾಸಗಳಂತಹ ಒಣ ಉಸಾಬರಿಗೆ ಹೋಗಲಿಲ್ಲ ಆದರೆ ಮಾನವ ಸಂಬಂಧಗಳಿಗೆ, ಕುಟುಂಬಕ್ಕಿರುವ ಶಕ್ತಿಯ ಮೌಲ್ಯವನ್ನು ಎತ್ತಿ ತೋರಿಸಿದರು. ಸ್ವತಃ ಮುಸ್ಲಿಂ ಆಗಿದ್ದರೂ ಎಲ್ಲ ಧರ್ಮಗಳನ್ನು ಪ್ರೀತಿಸಿದರು. ಇಂದಿಗೂ ಆದರ್ಶ ವ್ಯಕ್ತಿಯ ಅಥವಾ ನನ್ನಿಷ್ಟದ ವ್ಯಕ್ತಿ ಯಾರೆಂಬ ಪ್ರಶ್ನೆ ಬಂದಾಗ ಕಲಾಂ ನನ್ನ ಉತ್ತರದಲ್ಲಿ ಮೊದಲಾಗಿರುತ್ತಾರೆ.
Article bari bardiri allri. Nanu Kalam, Vajapayee avara big fan mathu NRN Murthy.