ಜಟಿಲ ಕಾನನದ ಕುಟಿಲ ಪಥಗಳಲಿ ಹರಿದು ಕಡಲ ಸೇರಿದ ತೊರೆ – ಜೋಗತಿ ಮಂಜಮ್ಮ: ಹುಲ್ಲಾಗು_ಬೆಟ್ಟದಡಿ(15)
ಬಹಳ ದಿನಗಳ ನಂತರ ಹುಲ್ಲಾಗು ಬೆಟ್ಟದಡಿ ಅಂಕಣವನ್ನು ಬರೆಯುತ್ತಿದ್ದೇನೆ. ನಿಮಗೆಲ್ಲ ಗೊತ್ತೇ ಇರುವಂತೆ ಎಲೆ ಮರೆಯ ಸಾಧಕರ, ಸಾಧಿಸುವುದಕ್ಕೆ, ಬದುಕುವುದಕ್ಕೆ ಸ್ಪೂರ್ತಿ ತುಂಬುವವರ ಜೀವನಗಾಥೆಗಳೇ ಹುಲ್ಲಾಗು ಬೆಟ್ಟದಡಿ ಅಂಕಣಗಳು. ಹಾಗಾಗಿ ಅಂತಹವರು ಸಿಗುವವರೆಗೂ ಬರೆಯುವುದಕ್ಕೆ ಕಾರಣವೇ ಇರುವುದಿಲ್ಲ. ಈಗ ಬಹಳ ದೊಡ್ಡ ಕಾರಣವೊಂದು ಸಿಕ್ಕಿದೆ. ಮೊನ್ನೆಯಷ್ಟೇ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನಾರದ, ನಮ್ಮವರೇ ಆದ ಮಂಜಮ್ಮ ಜೋಗತಿಯವರ ಬಗ್ಗೆ ಈ ಹುಲ್ಲಾಗು ಬೆಟ್ಟದಡಿ ಲೇಖನ.
ನೀವೆಲ್ಲ ಜೋಗಮ್ಮ, ಜೋಗಪ್ಪನ ಬಗ್ಗೆ ಕೇಳಿರಬಹುದು. ಉತ್ತರ ಕರ್ನಾಟಕದಲ್ಲಂತೂ ಈ ಸಂಪ್ರದಾಯ ಮನೆ ಮನೆಗಳಲ್ಲಿಯೂ ಪರಿಚಿತ. ನನ್ನ ಅಜ್ಜನ ಮನೆದೇವರು ಯಲ್ಲಮ್ಮದೇವಿ. ಹಾಗಾಗಿ ನಮ್ಮ ಮನೆಗೆ ದಸರಾ ಹಬ್ಬದ ಸಮಯದಲ್ಲಿ ಜೋಗಮ್ಮನನ್ನು ಕರೆಸುವುದು ಹಲವಾರು ವರ್ಷಗಳಿಂದ ನಡೆದುಕೊಂಡ ಬಂದ ಸಂಪ್ರದಾಯ. ಇದಕ್ಕೆ ಪಡಲಗಿ (ಹಡಗ್ಲಿ, ಹಡಲಗಿ) ತುಂಬಿಸುವುದು ಎಂದು ಹೇಳುತ್ತಾರೆ. ಅಡುಗೆಯೆಲ್ಲ ಸಿದ್ಧಗೊಂಡ ನಂತರ ನಾವು ಜೋಗಮ್ಮನ ಮನೆಗೆ ಹೋಗಿ ಆಕೆಯನ್ನು ಆಹ್ವಾನಿಸಿ ಬರುತ್ತಿದ್ದೆವು. ಒಂದು ದೊಡ್ಡ ಬಿದಿರಿನ ಬುಟ್ಟಿ, ಅದರೊಳಗೆ ಸೀರೆ ಉಡಿಸಿದ ಯಲ್ಲಮ್ಮನ ಮೂರ್ತಿ, ಕರಡಿ ಕೂದಲಿನ ಚೌಡಿ (ಇದು ಕರಡಿ ಕೂದಲಿನದ್ದೆಂದು ಬಹಳ ವರ್ಷಗಳ ಮೇಲೆ ಗೊತ್ತಾಗಿದ್ದು), ಭಂಡಾರವನ್ನು ಇಟ್ಟು ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ನಮ್ಮ ಮನೆಗೆ ಬರುತ್ತಿದ್ದಳು ಜೋಗಮ್ಮ. ಕವಡೆಯ ಸರ, ಹಣೆ ತುಂಬ ಭಂಡಾರ, ಗಂಟು ಗಂಟಾದ ಜಡೆ, ಒಂದು ಕಾಲಿಗೆ ದಪ್ಪನೆಯ ಬೆಳ್ಳಿಯ ಕಡಗ ಕೆಲವೊಮ್ಮೆ ಬಿಳಿ ಸೀರೆ ಒಮ್ಮೊಮ್ಮೆ ಇಳಕಲ್ ಸೀರೆಯಂತಹದ್ದನ್ನು ಉಟ್ಟುಕೊಂಡು ಬರುತ್ತಿದ್ದ ಜೋಗಮ್ಮನೆಂದರೆ ನಮಗೆಲ್ಲ ಪೂಜ್ಯ ಭಾವನೆ. ದೇವರು ಅಯ್ದುಕೊಂಡವರಷ್ಟೇ ಜೋಗತಿಯಾಗುತ್ತಾರೆ ಎಂದು ಹೇಳಿದ್ದರಿಂದ ಭಯ ಭಕ್ತಿ ತುಂಬಿಕೊಳ್ಳುತ್ತಿತ್ತು. ಹೀಗೆ ಮನೆಗೆ ಆಗಮಿಸಿದ ಜೋಗಮ್ಮನ ಕಾಲು ತೊಳೆದು ಮನೆಯೊಳಗೆ ಆಹ್ವಾನಿಸಿ, ಮಾಡಿದ್ದ ಅಡುಗೆಯೆಲ್ಲವನ್ನು ಬಡಿಸಿ, ಯಲ್ಲಮ್ಮನಿಗೆ ಸೀರೆ, ಅಕ್ಕಿ ಬೇಳೆ ಕೊಟ್ಟು ಕೊನೆಗೆ ನಾವೆಲ್ಲ ಸರತಿಯಲ್ಲಿ ಜೋಗಮ್ಮನಿಂದ ಭಂಡಾರ ಹಚ್ಚಿಸಿಕೊಂಡು ಆಕೆಯ ಚೌಡಿಯಿಂದ ತಲೆಯ ಮೇಲೆ ಆಶೀರ್ವಾದ ಮಾಡಿಸಿಕೊಳ್ಳುತ್ತಿದ್ದೆವು. ನಂತರ ಎಲ್ಲವನ್ನು ಬುಟ್ಟಿಯಲ್ಲಿಟ್ಟುಕೊಂಡು, ಬುಟ್ಟಿಯನ್ನು ತಲೆಯ ಮೇಲೆ ಇಟ್ಟುಕೊಂಡು ತಿರುಗಿ ನೋಡದೆ (ಹಾಗೆ ನೋಡಬಾರದೆಂದು ಪ್ರತೀತಿ) ಹೊರಡುತ್ತಿದ್ದಳು ಜೋಗಮ್ಮ. ಇನ್ನು ಯಲ್ಲಮ್ಮನ ಗುಡ್ಡಕ್ಕೆ ಹೋದಾಗಲಂತೂ ಹೀಗೆ ಬುಟ್ಟಿ ಅಥವಾ ಕೊಡ ಹೊತ್ತು ಓಡಾಡುತ್ತಿದ್ದ ಜೋಗಮ್ಮನನ್ನು ನೋಡುವುದು ಸಾಮಾನ್ಯವಾಗಿತ್ತು.
ಮೇಲ್ವರ್ಗ ಮತ್ತು ಅಧಿಕಾರ ವರ್ಗದಿಂದ ಬಹಳ ವರ್ಷಗಳಿಂದ ಶೋಷಣೆಗೆ ಒಳಗಾದ ಈ ದೇವದಾಸಿ ಮತ್ತು ಜೋಗತಿ ಪದ್ಧತಿಗಳಲ್ಲಿ ಇವತ್ತು ದೇವದಾಸಿಯರೆಂಬ ಅನಿಷ್ಟ ಪದ್ಧತಿ ಕಾಣೆಯಾಗುತ್ತಿದ್ದು, ಜೋಗತಿ ಪದ್ಧತಿ ಅವನ್ನೆಲ್ಲ ಮೆಟ್ಟಿ ಸಮಾಜದಲ್ಲಿ ತನ್ನದೇ ಸ್ಥಾನವನ್ನು ದಕ್ಕಿಸಿಕೊಂಡಿದೆ. ಪುರಾಣದ ಕತೆಯ ಪ್ರಕಾರ ಮಹರ್ಷಿ ಜಮದಗ್ನಿಯ ಹೆಂಡತಿ ರೇಣುಕಾ, ಒಂದು ದಿನ ಗಂಡನ ಪೂಜೆಗೆ ನೀರು ತರುವಾಗ ನದಿಯಲ್ಲಿ ಜಲಕ್ರೀಡೆಯಲ್ಲಿ ತೊಡಗಿದ್ದ ಗಂಧರ್ವನನ್ನು ನೋಡಿ ಆಕರ್ಷಿತಳಾಗುತ್ತಾಳಂತೆ. ಇದು ಜಮದಗ್ನಿಗೆ ಗೊತ್ತಾಗಿ, ರೇಣುಕೆಗೆ ಕುರೂಪಿಯಾಗೆಂದು ಶಾಪ ಕೊಟ್ಟು ಆಕೆಯನ್ನು ಆಶ್ರಮದಿಂದ ಹೊರ ಹಾಕಿ ಬಿಡುತ್ತಾನೆ. ದಿಕ್ಕು ತಪ್ಪಿದವಳಂತೆ ಕಾಡಿನಲ್ಲಿ ಅಲೆದಾಡುವಾಗ ರೇಣುಕೆಗೆ ಎಕ್ಕಯ್ಯ ಮತ್ತು ಜೋಗಯ್ಯ ಎನ್ನುವ ಸಿದ್ಧರ ಪರಿಚಯವಾಗುತ್ತದೆ. ಅವಳನ್ನು ಜೋಗುಳದ ಬಾವಿಯಲ್ಲಿ (ಯಲ್ಲಮ್ಮನ ಗುಡ್ಡದಲ್ಲಿರುವ ಜೋಗುಳದ ಬಾವಿ) ಸ್ನಾನ ಮಾಡಿಸಿ ಐದು ಮನೆಗಳಿಂದ ಭಿಕ್ಷೆ ತರಲು ಹೇಳುತ್ತಾರೆ ಎಕ್ಕಯ್ಯ ಮತ್ತು ಜೋಗಯ್ಯ. ಈ ಸಂಪ್ರದಾಯವೇ ಇವತ್ತಿಗೂ ಹಡ್ಲಗಿ ಅಥವಾ ಪಡಲಗಿಯ ರೂಪದಲ್ಲಿ ಆಚರಣೆಯಲ್ಲಿದೆ. ಹೀಗೆ ಐದು ಮನೆಗಳಿಂದ ರೇಣುಕಾ ಭಿಕ್ಷೆ ತಂದ ನಂತರ ಶಾಪ ವಿಮೋಚನೆಯಾಗಿ ಅವಳ ಮೊದಲಿನ ರೂಪ ಮರಳಿ ಬಂದಾಗ ಆಕೆ ಮತ್ತೆ ತನ್ನ ಪತಿ ಜಮದಗ್ನಿಯಿದ್ದೆಡೆಗೆ ಹೋಗುತ್ತಾಳೆ. ಆದರೆ ಜಮದಗ್ನಿಯ ಕೋಪವಿನ್ನೂ ತೀರಿರಲಿಲ್ಲ. ತಮ್ಮ ಮಕ್ಕಳಿಗೆ ತಾಯಿಯ ತಲೆಯನ್ನು ಕಡಿಯಬೇಕೆಂದು ಹೇಳಿದಾಗ ಐವರಲ್ಲಿ ನಾಲ್ವರು ನಿರಾಕರಿಸುತ್ತಾರೆ. ಜಮದಗ್ನಿ ಅವರಿಗೆ ನಪುಂಸಕರಾಗಿ ಎಂದು ಶಾಪ ಕೊಟ್ಟನೆಂದು ಕತೆಯಲ್ಲಿ ಬರುತ್ತದೆ. ಅದಕ್ಕೆ ಯಲ್ಲಮ್ಮನ ಭಕ್ತರು ‘ಯಲ್ಲಮ್ಮ ನಿನ್ನಾಲ್ಕು ಉಧೋ ಉಧೋ’ ಎಂದು ಹೇಳುತ್ತ ಈ ನಾಲ್ವರನ್ನು ನೆನಸುತ್ತಾರಂತೆ. ಕೊನೆಗೆ ರೇಣುಕೆಯ ಮಗ ಪರಶುರಾಮ ಅಪ್ಪನ ಆಜ್ನೆಯಂತೆ ತಾಯಿಯ ತಲೆಯನ್ನು ಕಡಿದು ಹಾಕುತ್ತಾನೆ. ಈ ಕತೆ ಹೀಗೆ ಮುಂದುವರೆಯುತ್ತದೆ. ಇನ್ನೂ ಹಲವು ರೂಪಗಳು ಈ ಕತೆಗೆ. ಬರೆಯ ಹೊರಟರೆ ಆ ಕತೆಗಳೇ ಪುಸ್ತಕವಾಗಬಹುದು. ನಾನಿಲ್ಲಿ ಹೇಳ ಹೊರಟಿದ್ದು ಜೋಗತಿ ಪದ್ಧತಿ ಆಚರಣೆಗೆ ಹೇಗೆ ಬಂದಿತು ಎಂದು. ತಾಯಿಯ ತಲೆಯನ್ನು ಕಡಿಯಲೊಪ್ಪದೇ ನಪುಂಸಕರಾದ ಜಮದಗ್ನಿಯ ಮಕ್ಕಳು ಜೋಗಪ್ಪಗಳಾಗಿ ತಾಯಿಯ ಭಕ್ತರಾಗುತ್ತಾರೆ ಎಂದು ಪುರಾಣದ ಕತೆಯಲ್ಲಿ ಬರುತ್ತದೆ.
ಹೀಗೆ ಜೋಗತಿ ಸಂಪ್ರದಾಯ ಶುರುವಾಗಿದ್ದು. ಜೋಗತಿ ಮಂಜಮ್ಮನವರ ಕತೆಯನ್ನು ತಿಳಿದುಕೊಳ್ಳುವ ಮೊದಲು ಬಹಳ ಜನರಿಗೆ ಗೊತ್ತೇ ಇರದ ಈ ಜೋಗತಿ ಪದ್ಧತಿಯ ಬಗ್ಗೆ ಚೂರು ವಿವರವಿರಲಿ ಎನ್ನುವ ಉದ್ದೇಶವೇ ಈ ಪೀಠಿಕೆ. ಜೋಗಮ್ಮ ಜೋಗತಿಯರು ಸವದತ್ತಿ ಯಲ್ಲಮ್ಮ, ಹುಲಿಗೆಮ್ಮ, ಉಚ್ಚಂಗಿ ಯಲ್ಲಮ್ಮ ಹೀಗೆ ಯಲ್ಲಮ್ಮನ ದೇವಸ್ಥಾನಗಳಲ್ಲಿ ಚೌಡಿಕೆ ಪದ ಹಾಡುತ್ತ, ಹಡ್ಲಗಿ ತುಂಬಿಸಿಕೊಳ್ಳುತ್ತ, ಜೋಗತಿ ನೃತ್ಯ ಮಾಡುತ್ತ ಯಲ್ಲಮ್ಮನ ಸೇವೆಯಲ್ಲಿ ತೊಡಗುತ್ತಾರೆ.
ನಮ್ಮ ಉತ್ತರ ಕರ್ನಾಟಕದ ಕಡೆಗಳಲ್ಲಿ ಮಂಗಳಮುಖಿಯರಿಗೆ ಮುತ್ತು ಕಟ್ಟಿಸಿ ಜೋಗತಿ ಪದ್ಧತಿಗೆ ಸೇರಿಸಿ ಬಿಡುವ ಸಂಪ್ರದಾಯವಿದೆ. ಈ ರೀತಿಯಾಗಿ ಅವರು ಅನೈತಿಕ ವ್ಯವಹಾರಗಳಲ್ಲಿ ತೊಡಗದೇ ದೇವರ ಸೇವೆ ಮಾಡಿಕೊಂಡಿರುತ್ತಾರೆ ಎನ್ನುವುದು ಜನರ ಅಭಿಮತ. ಅವರಿಗೆ ಇಷ್ಟವಿರಲಿ ಇಲ್ಲದಿರಲಿ.. ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಕ್ಕಳನ್ನು ಮನೆಯಿಂದ ಹೊರ ಹಾಕಿ ಕೈ ತೊಳೆದುಕೊಂಡು ಬಿಡುತ್ತಾರೆ ಪೋಷಕರು. ಹೀಗೆ ಇತ್ತ ಹೆಣ್ಣು ಅಲ್ಲದ ಗಂಡೂ ಅಲ್ಲದ ಅದೆಷ್ಟೋ ಜನ ಜೋಗಪ್ಪ, ಜೋಗತಿಯರಾಗಿ ಬಾಳುತ್ತಿದ್ದಾರೆ.
ಈಗ ಹೇಳ ಹೊರಟಿರುವ ಮಂಜಮ್ಮನವರು ಬಳ್ಳಾರಿ ಜಿಲ್ಲೆಯಲ್ಲಿ ಬರುವ ತಗ್ಗಿನಮಠ ಎಂಬ ಕಡು ಹಳ್ಳಿಯಲ್ಲಿ ಜನಿಸಿದವರು. ಅಪ್ಪ ಹನುಮಂತಯ್ಯ ಶೆಟ್ಟಿ , ಅಮ್ಮ ಜಯಲಕ್ಷ್ಮಿ. ಹುಟ್ಟಿದಾಗ ಹುಡುಗನಾಗಿ ಜನಿಸಿದ ಇವರಿಗೆ ಮಂಜುನಾಥ ಎನ್ನುವ ನಾಮಕರಣ ಮಾಡುತ್ತಾರೆ ತಂದೆ ತಾಯಿ. ಮಂಜುನಾಥ ಬೆಳೆಯುತ್ತಿದ್ದಂತೆ ಹೆಣ್ಣಿನ ಭಾವನೆಗಳು ಹುಟ್ಟತೊಡಗಿ ಮುಂದೆ ಏಳನೆಯ ತರಗತಿ ಸೇರುವ ಹೊತ್ತಿಗೆ ದೇಹದಲ್ಲಿಯೂ ಹೆಣ್ಣಿನಂತಹ ದೈಹಿಕ ಬದಲಾವಣೆಗಳಾದವು. ಅದು ೧೯೫೦ರ ಕಾಲ. ಸಮಾಜ ಈ ತರಹದ ದೈಹಿಕ ರೂಪವನ್ನು, ಭಾವನೆಗಳನ್ನು ಮೂದಲಿಸುತ್ತಿದ್ದ ಕಾಲ. ಅಂತಹ ಮೂದಲಿಕೆ, ತಾತ್ಸಾರಗಳು ಈಗಲೂ ಇವೆಯಾದರೂ ಜನರ ದೃಷ್ಟಿ ಬದಲಾಗುತ್ತಿದೆಯೆಂಬುದಷ್ಟೇ ಖುಷಿಯ ವಿಚಾರ. ಅದರಲ್ಲೂ ಬಡತನದ ಕುಟುಂಬದಲ್ಲಿ ಜನಿಸಿದ ಮಂಜುನಾಥನಿಗೆ ಈ ಬದಲಾವಣೆ ಮಾರಕವಾಯಿತು. ಅಪ್ಪನಿಂದ ಹೊಡೆತ ಶುರುವಾಯಿತು. ಹೊಡೆದರೆ, ಶಿಕ್ಷಿಸಿದರೆ ಮಂಜುನಾಥನನ್ನು ಸರಿ ಪಡಿಸಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ದೈಹಿಕ ಮಾರ್ಪಾಡು, ಬೆಳಗಾದರೆ ಕಿತ್ತು ತಿನ್ನುತ್ತಿದ್ದ ಭಾವನೆಗಳನ್ನು ನಿಯಂತ್ರಿಸುವುದು ಮಂಜುನಾಥನ ಕೈಯ್ಯಲ್ಲಿರಲಿಲ್ಲ. ಸೋತ ತಂದೆ ತಾಯಿ ಮಂಜುನಾಥನನ್ನು ಹೊಸಪೇಟೆಯ ಹುಲಿಗೆಮ್ಮನ ದೇವಸ್ಥಾನದಲ್ಲಿ ಜೋಗತಿಯಾಗಿ ಮುತ್ತು ಕಟ್ಟಿಸುತ್ತಾರೆ. ಮುತ್ತು ಕಟ್ಟಿಸುವುದೆಂದರೆ ದೇವರ ಜೊತೆ ಮದುವೆ ಮಾಡಿಸಿದಂತೆ. ಪೂಜಾರಿ ಅಥವಾ ಯಲ್ಲಮ್ಮನ ವಂಶದವರು ಈ ಕಾರ್ಯ ಮಾಡಿಸುತ್ತಾರೆ. ಮುತ್ತುಗಳನ್ನು ದಾರದಲ್ಲಿ ಪೋಣಿಸಿ ಜೋಗತಿ ಅಥವಾ ಜೋಗಪ್ಪನಾಗುವವರ ಕತ್ತಿಗೆ ಕಟ್ಟಿ ಹಡ್ಲಗಿ ತುಂಬಿಸುತ್ತಾರೆ. ಹೀಗೆ ಮುತ್ತು ಕಟ್ಟಿಸಿಕೊಂಡವರಿಗೆ ಜೀವನ ನಡೆಸಲು ಅನೇಕ ವಿಧಿ ವಿಧಾನಗಳಿರುತ್ತವೆ. ತಂದೆ ತಾಯಿಯ ಮುಂದೆಯೇ ಉಡದಾರವನ್ನು ಕತ್ತರಿಸಿ ಮುತ್ತು ಕಟ್ಟಿದ ಹಿರಿಯ ಜೋಗತಿ, ಮಂಜುನಾಥನನ್ನು ಜೋಗಮ್ಮ ಮಂಜಮ್ಮನಾಗಿ ರೂಪಾಂತರ ಮಾಡಿಸುತ್ತಾಳೆ.
ಅಲ್ಲಿಂದ ಮಂಜಮ್ಮನ ಕರಾಳ ದಿನಗಳು ಶುರು. ಬದುಕುವುದಕ್ಕೆ ಏನು ಮಾಡುವುದು? ಇತರೆ ಮಂಗಳಮುಖಿಯರಂತೆ ಮಂಜಮ್ಮನೂ ಭಿಕ್ಷೆ ಬೇಡಲು ಶುರು ಮಾಡುತ್ತಾಳೆ. ಅದು ಬಿಟ್ಟರೆ ಬೇರೆ ಆಯ್ಕೆಯಾದರೂ ಏನಿತ್ತು? ಜೊತೆಗೆ ನಿಲ್ಲದ ದೈಹಿಕ ಹಿಂಸೆಗಳು, ಕಾಮುಕರ ಅಟ್ಟಹಾಸಗಳು. ಮಂಗಳಮುಖಿಯರೆಂದರೆ ನಾಲ್ಕಾಣೆ ಬೆಲೆ ಕೊಡದ ನಮ್ಮ ಸಮಾಜದಲ್ಲಿ ಗೌರವದಿಂದ ಬಾಳುವುದಕ್ಕೆ ಪ್ರತಿ ಕ್ಷಣವೂ ಹೋರಾಡುತ್ತಿರಬೇಕು. ಕೆಲವರಿಗೆ ಜೀವನ ಎಲ್ಲವನ್ನೂ ಮೊಗೆದು ಮೊಗೆದು ಕೊಟ್ಟಿರುತ್ತದೆ. ಇನ್ನು ಕೆಲವರಿಗೆ ಜೀವನವೇ ರಣರಂಗ. ಪ್ರತಿಯೊಂದನ್ನು ದಕ್ಕಿಸಿಕೊಳ್ಳಲು ಕಷ್ಟ ಪಡಬೇಕು, ಏಗಬೇಕು, ಅವಮಾನಗಳನ್ನು ಸಹಿಸಬೇಕು.. ಆದರೆ ಮಂಜಮ್ಮ ಧೃತಿಗೆಡಲಿಲ್ಲ. ಕತ್ತಲು ತುಂಬಿದ ಮಂಜಮ್ಮನ ಜೀವನದಲ್ಲಿ ಬೆಳಕನ್ನು ಹಬ್ಬಿಸಿದ್ದು ಮತ್ತಿಕಲ್ ಬಸಪ್ಪನವರು. ಅವರೇ ಬಣ್ಣ ಹಚ್ಚಿಕೊಳ್ಳುವುದನ್ನು, ನೃತ್ಯವನ್ನು ಕಲಿಸಿ, ರಂಗಸ್ಥಳ ಹತ್ತಿಸುತ್ತಾರೆ. ಹಲವಾರು ಕಡೆ ನಾಟಕಗಳಲ್ಲಿ ಪ್ರದರ್ಶನ ನೀಡುತ್ತಾಳೆ ಮಂಜಮ್ಮ. ಕಲೆಯೇ ತನ್ನ ಜೀವನಕ್ಕೊಂದು ನೆಲೆ ಕೊಡಬಲ್ಲದು ಎಂಬುದನ್ನು ಅರಿತ ಮಂಜಮ್ಮ ತನ್ನೆಲ್ಲ ಆಸಕ್ತಿಯನ್ನು, ಸಮಯವನ್ನು ನಾಟಕಗಳಲ್ಲಿ ಪಾತ್ರ ವಹಿಸುವುದರಲ್ಲಿ, ನಟನೆಯನ್ನು ಅರಗಿಸಿಕೊಳ್ಳುವುದರಲ್ಲಿ ಕಳೆಯುತ್ತಾಳೆ.
ನಂತರ ಜೋಗತಿ ಕಾಳವ್ವನ ಪರಿಚಯವಾಗುತ್ತದೆ. ಕುಟುಂಬದಿಂದ ಸಮಾಜದಿಂದ ತಿರಸ್ಕ್ರುತಗೊಂಡ ಈ ಕೂಸನ್ನು ತನ್ನ ಕಂದನಂತೆಯೇ ಅಪ್ಪಿಕೊಂಡು ತನಗೆ ಗೊತ್ತಿದ್ದ ವಿದ್ಯೆಯೆಲ್ಲವನ್ನು ಧಾರೆಯೆರೆಯುತ್ತಾಳೆ ಜೋಗತಿ ಕಾಳವ್ವ. ಅವಳಿಂದ ಜೋಗತಿ ನೃತ್ಯ ಕಲಿತು ಗುರು ಶಿಷ್ಯರಿಬ್ಬರು ವೇದಿಕೆಗಳಲ್ಲಿ ಜೋಗತಿ ನೃತ್ಯ ಮತ್ತು ಚೌಡಿಕೆ ಪದದ ಪ್ರದರ್ಶನ ನೀಡಲು ಶುರು ಮಾಡುತ್ತಾರೆ. ಅಲ್ಲಿಯವರೆಗೆ ಬೀದಿಗಳಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ಜೋಗತಿ ನೃತ್ಯ, ಮಂಜಮ್ಮ ಮತ್ತು ಅವರ ಗುರು ಕಾಳವ್ವನ ದೆಸೆಯಿಂದ ಇತರೆ ಕಲೆಗಳಂತೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲು ಶುರುವಾಗುತ್ತದೆ. ಜೋಗತಿ ನೃತ್ಯ ಮತ್ತು ಚೌಡಿಕೆ ಪದದ ಸಹಾಯದಿಂದ ಮಂಜಮ್ಮನವರಿಗೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ಪ್ರಸಿದ್ಧಿ ದಕ್ಕುತ್ತದೆ.
ಚೌಡಿಕೆ ಎಂಬುದು ಜಾನಪದ ವಾದ್ಯ. ಜಮದಗ್ನಿಯನ್ನು ಕೊಂದು ಕಾಮಧೇನುವನ್ನು ತೆಗೆದುಕೊಂಡು ಹೋದ ಕಾರ್ತವೀರ್ಯನನ್ನು ಪರಶುರಾಮ ಕೊಂದು ಅವನ ದೇಹದಿಂದಲೇ ಚೌಡಿಕೆ ವಾದ್ಯವನ್ನು ತಯಾರಿಸಿದನೆಂದು ಕತೆಯಿದೆ. ಈ ವಾದ್ಯವನ್ನು ನುಡಿಸುತ್ತಾ, ಅದರ ತಾಳಕ್ಕೆ ನರ್ತಿಸುತ್ತಾ ಜೋಗಪ್ಪ ಜೋಗತಿಯರು ರೇಣುಕಾದೇವಿಯ ಮಹಾತ್ಮೆಯನ್ನು ಹೇಳುತ್ತಾರೆ. ಮೊದಲೆಲ್ಲ ಬೀದಿಗಳಲ್ಲಿ ಅಲೆಯುತ್ತ, ವಾದ್ಯ ನುಡಿಸುತ್ತ, ಭಿಕ್ಷೆ ಬೇಡಲು ಮಾತ್ರ ಸೀಮಿತವಾಗಿದ್ದ ಈ ಕಲೆಗೆ ಮಂಜಮ್ಮನವರ ಪರಿಶ್ರಮದಿಂದ ವೇದಿಕೆ ಸಿಕ್ಕಿದೆ. ಹೀಗೆ ಅವಸಾನಕ್ಕೆ ತೆರಳುತ್ತಿದ್ದ ಜಾನಪದ ನೃತ್ಯಕ್ಕೆ ಜೀವ ಕೊಟ್ಟು ಮುಂದಿನ ತಲೆಮಾರುಗಳಿಗೆ ಪರಿಚಯಿಸುತ್ತಿರುವ ಕೀರ್ತಿ ಮಂಜಮ್ಮನವರದ್ದು. ಇದೇ ಕಾರಣಕ್ಕೆ ಯಡಿಯೂರಪ್ಪನವರ ಸರಕಾರದಿಂದ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ತಮಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಜತನದಿಂದ ನಿರ್ವಹಿಸುತ್ತಿದ್ದಾರೆ ಜೋಗತಿ ಮಂಜಮ್ಮ. ಅವರ ಪ್ರಯತ್ನದಿಂದ ಬೀದಿಗಳಲ್ಲಿಯೇ ಕಾಲಕಸವಾಗುವ ಬದಲು ಕಲಾಸಕ್ತರ ಮುಂದೆ ಪ್ರದರ್ಶಿಸಿ ಭೇಷ ಎನ್ನಿಸಿಕೊಳ್ಳುತ್ತಿವೆ ಈ ಜಾನಪದ ಕಲೆಗಳು. ಆದರೆ ಯುವಜನರಲ್ಲಿ ಈ ಕಲೆಗಳನ್ನು ಕಲಿಯುವ ಆಸಕ್ತಿ ಕುಂದುತ್ತಿರುವುದರಿಂದ ಪುರಾಣಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿರುವ, ಪೌರಾಣಿಕ ಹಿನ್ನಲೆಯುಳ್ಳ ಈ ಕಲಾ ಪ್ರಕಾರಗಳು ನಶಿಸಿ ಹೋಗುತ್ತವೆಯೆನೋ ಎನ್ನುವ ಭೀತಿ ಜೋಗತಿ ಮಂಜಮ್ಮನವರದ್ದು.
ಎಲ್ಲೋ ಹುಟ್ಟಿ ಯಾವುದೋ ಕಡಲನ್ನು ಸೇರುವ ನದಿಯಂತೆ ಮಂಜಮ್ಮನವರ ಜೀವನ ಅಡೆತಡೆಗಳನ್ನು ದಾಟಿ ಹರಿಯುತ್ತ ಈಗ ಅವರನ್ನು ಪದ್ಮಶ್ರೀ ಪ್ರಶಸ್ತಿಯವರೆಗೆ ತಂದು ನಿಲ್ಲಿಸಿದೆ. ಭಾರತ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ೨೦೨೧ರ ಸಾಲಿನ ಪದ್ಮಶ್ರೀ ಪ್ರಶಸ್ತಿಯು ಜೋಗತಿ ಮಂಜಮ್ಮನವರಿಗೆ ಬಂದಿದೆ ಎಂಬುದು ಸಂತಸದ ವಿಚಾರ. ಈ ಪ್ರಶಸ್ತಿಯಿಂದ ತಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿಕೊಳ್ಳುವ ಮಂಜಮ್ಮನವರಿಗೆ ಜನಪದ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಬೇಕು, ಜೋಗತಿ ನೃತ್ಯ, ಚೌಡಿಕೆ ಪದಗಳನ್ನು ಈಗಿನ ತಲೆಮಾರಿನವರು ಆಸಕ್ತಿಯಿಂದ ಕಲಿಯುವಂತಾಗಬೇಕು ಎನ್ನುವ ದೊಡ್ಡ ಆಸೆಯಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಅವರ ಆತ್ಮಕತೆ ‘ನಡುವೆ ಸುಳಿದ ಹೆಣ್ಣು’ (ನಿರೂಪಣೆ: ಡಾ.ಅರುಣ್ ಜೋಳದ ಕೂಡ್ಲಿಗಿ), ಮಂಜಮ್ಮನವರು ಜೀವನದಲ್ಲಿ ಅನುಭವಿಸಿದ ಸಂಕಟವನ್ನು, ಸಮಾಜದ ತಿರಸ್ಕಾರವನ್ನು, ಈ ಹಂತದವರೆಗೆ ತಲುಪಲು ಸವೆಸಿದ ದಾರುಣ ದಿನಗಳನ್ನು ಪರಿಚಯಿಸುತ್ತದೆ.
ಮಂಗಳಮುಖಿಯಾದರೂ ಇತರರಂತೆ ಮುಚ್ಚಿದ ಬಾಗಿಲಿನ ಹಿಂದೆ ಬಚ್ಚಿಟ್ಟುಕೊಳ್ಳದೆ ತಮ್ಮ ಜೀವನವನ್ನೇ ತೆರೆದ ಪುಸ್ತಕವನ್ನಾಗಿಸಿ, ಕಷ್ಟ ಪಟ್ಟು ಒಳ್ಳೆಯ ಸ್ಥಾನ ದಕ್ಕಿಸಿಕೊಂಡ ಮಂಜಮ್ಮನವರು ಹಲವರಿಗೆ ಮಾದರಿ. ಇಷ್ಟೆಲ್ಲ ಪ್ರಶಸ್ತಿ, ಸನ್ಮಾನಗಳು ಹಿಂಬಾಲಿಸಿಕೊಂಡು ಬಂದಿದ್ದರೂ ತನ್ನಂತೆಯೇ ಸಂಕಟವನ್ನು ಅನುಭವಿಸುತ್ತಿರುವವರ ಜೊತೆಯಲ್ಲಿಯೇ ಹಳ್ಳಿಯಲ್ಲಿಯೇ ಬಾಳುತ್ತ ಅವರಿಗಾಗಿ ಜೀವನವನ್ನು ಮುಡುಪಾಗಿಟ್ಟ ಮಂಜಮ್ಮನವರು ಮಾತಾ ಎಂದೇ ಪ್ರಸಿದ್ಧ.
ಮಂಗಳಮುಖಿಯರು ಎದುರಾದರೆ ಅವರು ನಮ್ಮ ನಿಮ್ಮಂತೆಯೇ ಮನುಷ್ಯರು ಎಂಬುದನ್ನು ನೆನಪಿಟ್ಟುಕೊಳ್ಳಿ. ಅವರನ್ನು ಸಮಾಜಕ್ಕೆ ಉಚಿತವಾಗಿ ಸಿಕ್ಕ ಸರಕುಗಳಂತೆ ನೋಡದೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೊಡಬೇಕಾದ ಗೌರವವನ್ನು ಕೊಡಿ. ಜಸ್ಟ್ ಅ ಬೆಸಿಕ್ ಹ್ಯುಮನ್ ಡಿಗ್ನಿಟಿ.. ಜಗತ್ತು ಇಷ್ಟು ಮುಂದುವರೆದರೂ ಇನ್ನೂ ಭಿಕ್ಷೆ ಬೇಡಿ ಬದುಕುತ್ತಿರುವ ಅವರಿಗೆ ಸಮಾಜದಲ್ಲಿ ಗೌರವಯುತ ಕೆಲಸ, ಮರ್ಯಾದೆಗಳು ಸಿಗುವಂತಾಗಲಿ. ಜೋಗತಿ ಮಂಜಮ್ಮನವರ ಕಡೆಯಿಂದ ಇನ್ನಷ್ಟು ಸಾಮಾಜಿಕ ಅಭಿವೃದ್ಧಿ ಕೆಲಸಗಳು ನಡೆಯಲಿ ಮತ್ತು ಭಗವಂತ ಅವರಿಗೆ ಆರೋಗ್ಯ, ತುಂಬು ಜೀವನವನ್ನು ಕರುಣಿಸಲಿ ಎಂಬುದೇ ನನ್ನ ಹಾರೈಕೆ.
ಅದ್ಭುತ, Nanu FDA ge prepare agtidini, ತುಂಬಾ ಉಪಯುಕ್ತವಾದ ವಿಷಯ, Thanks ma’am.